ಬೆಂಗಳೂರು: ಮುಡಾ ಒಂದೇ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಇನ್ನೂ ಹಲವು ಕೇಸ್ ಗಳಿವೆ ಎಂದು ಸಂಸದ ರಮೇಶ್ ಜಿಗಜಿಣಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರದ್ದು ಇದೊಂದೇ ಕೇಸ್ ಅಲ್ಲ. ಇನ್ನೂ ಬಹಳ ಇವೆ. ಯಾವ ಕೇಸ್ ಎಂದು ಗೊತ್ತಿಲ್ಲ. ಅವರಿವರು ಕರೆ ಮಾಡಿ ಹೇಳುತ್ತಿದ್ದಾರೆ. ಕೇಸ್ ಆಗುವುದಂತೂ ಸತ್ಯ. ಇದೆಲ್ಲಾ ಬಿಜೆಪಿ ಪ್ಲ್ಯಾನ್ ಅಲ್ಲ. ಅವರ ಜನರೇ ಪ್ಲ್ಯಾನ್ ಹಾಕುತ್ತಾರೆಂದು ಬಾಂಬ್ ಸಿಡಿಸಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ವಿರುದ್ದ ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿಯವರು ಬಳಕೆ ಮಾಡಿಕೊಂಡರು ಎಂಬ ವಿಚಾರವಾಗಿ ಮಾತನಾಡಿ, ಮುಡಾದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು ನಿಜ. ಹಾಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಿದ್ದೇವೆ. ಸಿದ್ದರಾಮಯ್ಯ ಒಳ್ಳೆ ಮನುಷ್ಯ, ಆತನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಆದರೆ, ಈ ವಿಷಯದಲ್ಲಿ ಅವರೂ ಅಧಿಕಾರಕ್ಕೆ ಬೆನ್ನು ಹತ್ತಿದ್ದಾರೆಂದು ಆರೋಪಿಸಿದರು.
ಈ ವಿಚಾರದಲ್ಲಿ ನನಗೂ ಬಹಳ ಕೆಡುಕೆನಿಸುತ್ತದೆ. ಹಿಂದೆ ಫೋನ್ ಕದ್ದಾಲಿಕೆ ವಿಚಾರ ಬಂದಾಗ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದ್ದರು. ಇಂದಿಗೂ ಅವರ ಹೆಸರಿಗೆ ಮುಂದಿನ 50 ವರ್ಷ ಹೆಗಡೆ ಅವರ ಹೆಸರು ಇರುತ್ತದೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೆ ಅವರದ್ದೂ ಹೆಸರು ಇರುತ್ತಿತ್ತು. ಆದರೆ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿಲ್ಲ. ಇವರು ಅಧಿಕಾರಕ್ಕೆ ಬೆನ್ನು ಹತ್ತಿದ್ದಾರೆ. ಯಾವುದೇ ತಪ್ಪಿಲ್ಲಾ ಎಂದು ಸಿಎಂ ಹೇಳುತ್ತಿದ್ದಾರೆ. ನಾಳೆ ಕೋರ್ಟ್ ಹೇಳುತ್ತದೆಯಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ನಡೆಯುತ್ತಿರುವ ಪೈಪೋಟಿ ಕುರಿತು ಮಾತನಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಹೆಸರಿದೆ, ಆದರೆ, ಅವರನ್ನು ಮೂಲೆಗೆ ಕೂರಿಸಿದ್ದಾರೆ. ಅವರ ಹೆಸರನ್ನು ಯಾರೂ ಪ್ರಸ್ತಾಪಿಸುತ್ತಿಲ್ಲ. ಎಂ.ಬಿ.ಪಾಟೀಲ್ ಅಷ್ಟೇ ಯಾಕೆ ಎಲ್ಲರೂ ಸಿಎಂ ಆಗಬೇಕೆನ್ನುತ್ತಾರೆ. ಇದು ಅವರ ಒಗ್ಗಟ್ಟು ಹೇಗಿದೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.