ಬೆಂಗಳೂರು: ಸಿಎಂ ಕುರ್ಚಿ ಮೇಲೆ ಕಣ್ಣೀಟ್ಟಿರುವ ಕಾಂಗ್ರೆಸ್ ಸಚಿವರು ತಮಗೆ ಇಷ್ಟಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಅಲ್ಲದೆ ಸರ್ಕಾರ ಅಭದ್ರವಾಗುವ ಸಾಧ್ಯತೆ ಇದೆ. ಹೀಗಾಗಿ ಬಹಿರಂಗ ಹೇಳಿಕೆ ನೀಡುತ್ತಿರುವವರಿಗೆ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಎಂಎಲ್ಸಿಗಳು ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿನ ಸಮಸ್ಯೆಗಳನ್ನು ಸಚಿವರು ಆಲಿಸಬೇಕು. ಅದನ್ನು ಬಿಟ್ಟು ತಾವು ಸಿಎಂ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳುವ ಮೂಲಕ ತಪ್ಪು ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಪಕ್ಷ ಶಿಸ್ತುಕ್ರಮದ ಎಚ್ಚರಿಕೆ ನೀಡಬೇಕು ಎಂದು ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಂಜುನಾಥ್ ಭಂಡಾರಿ ಅವರು ಮಲ್ಲಿಕಾರ್ಜು ಖರ್ಗೆಗೆ ಪತ್ರ ಬರೆದಿದ್ದಾರೆ.
ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಆತಂಕಕ್ಕೀಡಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಮುಡಾ ಹಗರಣ ಎಂಬ ಹುರುಳಿಲ್ಲದ ಸುಳ್ಳು ಆರೋಪ ಮಾಡಿ ಸರ್ಕಾರವನ್ನು ಅಭದ್ರ ಮಾಡಲು ಹೊರಟಿವೆ. ಆದರೆ ಕಾಂಗ್ರೆಸ್ ಸರ್ಕಾರದ ಭಾಗವಾಗಿರುವ ಸಚಿವರು ತಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಎಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಸಚಿವರು ಸಿದ್ದರಾಮಯ್ಯ ಅವರೇ ಸಿಎಂ ಹುದ್ದೆಯಲ್ಲಿ ಮುಂದುವರೆಯುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ ಸಿಎಂ ಹುದ್ದೆಗೆ ಹಿರಿತನವೇ ಮುಖ್ಯವಾಗುವ ವಿಚಾರದಲ್ಲಿ ಹಿರಿಯ ನಾಯಕರಾದ ಎಂಬಿ ಪಾಟೀಲ್ ಮತ್ತು ಶಿವಾನಂದ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಕಾಂಗ್ರೆಸ್ ನಲ್ಲಿ ಸಿಎಂ ಆಗಲು ಆಗಲು ಎಂ ಬಿ ಪಾಟೀಲ್ ಗಿಂತ ಬಹಳ ಜನರು ಹಿರಿಯರಿದ್ದಾರೆ ಎಂದು ಶಿವಾನಂದ ಪಾಟೀಲ್ ನೀಡಿದ ಹೇಳಿಕೆಗೆ ಎಂಬಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಶಿವಾನಂದ ಪಾಟೀಲ್ ಹೇಳಿದಂತೆ ಒಂದು ವೇಳೆ ಹಿರಿತನ ಪರಿಗಣಿಸುವುದಾದರೆ, ನಾನು ಕಾಯುತ್ತೇನೆ. ಅದನ್ನು ಒಪ್ಪಿಕೊಳ್ಳೋಣ. ಆದರೆ, ಇತ್ತೀಚೆಗೆ ಜನತಾದಳ, ಬಿಜೆಪಿಯಿಂದ ಬಂದಿರುವ ಅವರು ಮುಖ್ಯಮಂತ್ರಿ ರೇಸ್ ನಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು.