ಬೆಂಗಳೂರು: ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೋಕಸಭೆ ಮತ್ತು ವಿಧಾಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.
ಹಂತ ಹಂತವಾಗಿ ಲೋಕಸಭೆ, ರಾಜ್ಯ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಬುಧವಾರ ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, "ಸರ್ಕಾರದ ಹಣವನ್ನು ಉಳಿಸುವ ಉದ್ದೇಶದಿಂದ ಅವರು ಮಾಡಲು ಯೋಜಿಸುತ್ತಿರುವ 'ಒಂದು ರಾಷ್ಟ್ರ, ಒಂದು ಚುನಾವಣೆ' ನಮ್ಮಂತಹ ಪ್ರಜಾಪ್ರಭುತ್ವ ದೇಶದಲ್ಲಿ ಸಾಧ್ಯವಿಲ್ಲ. 'ಆಪರೇಷನ್ ಕಮಲ' ಮಾಡಿ ಸರ್ಕಾರ ಬೀಳಿಸುವವರೆ ಒಂದು ರಾಷ್ಟ್ರ ಒಂದು ಚುನಾವಣೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದರು.
ಪ್ರತಿಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, "ಪ್ರಾದೇಶಿಕ ಪಕ್ಷಗಳು ಬೆಳೆಯುವುದು ಅವರಿಗೆ ಇಷ್ಟವಿಲ್ಲ, ಆದ್ದರಿಂದ ಅವರು ಈ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ದೇಶದಲ್ಲಿ ಎಲ್ಲಾ ಪಕ್ಷಗಳಿಗೆ ಸಮಾನ ಅವಕಾಶವನ್ನು ನೀಡಬೇಕು" ಎಂದರು.
'ಒಂದು ರಾಷ್ಟ್ರ, ಒಂದು ಚುನಾವಣೆ' ಈ ಹಿಂದೆಯೂ ಜಾರಿಯಲ್ಲಿತ್ತು. "ನಮ್ಮ ರಾಜ್ಯದಲ್ಲಿ ನಾವು ಈ ಹಿಂದೆ (ಲೋಕಸಭೆ ಮತ್ತು ವಿಧಾನಸಭೆ ಎರಡೂ) ಒಟ್ಟಿಗೆ ಚುನಾವಣೆಗಳನ್ನು ನಡೆಸಿದ್ದೇವೆ. ಆದರೆ ನಂತರ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಒಂದ್ದಷ್ಟು ಸರ್ಕಾರಗಳು ಮೂರು ಅಥವಾ ಆರು ತಿಂಗಳು ಮುಂಚಿತವಾಗಿ ಚುನಾವಣೆಗೆ ಹೋಗುತ್ತವೆ. ಕೆಲವು ರಾಜ್ಯಗಳಲ್ಲಿ ಅಸೆಂಬ್ಲಿಗಳನ್ನು ವಿಸರ್ಜಿಸಲಾಯಿತು. ಈ ಎಲ್ಲಾ ವಿಷಯಗಳು ಸ್ಪಷ್ಟವಾಗಿರಬೇಕು. ಮೂರನೇ ಎರಡರಷ್ಟು ಬಹುಮತವಿಲ್ಲದ ಕೇಂದ್ರ ಸರ್ಕಾರದ ಈ ನಿರ್ಧಾರ ಸರಿಯಲ್ಲ ಎಂದರು.
"ಐತಿಹಾಸಿಕ ಹೆಜ್ಜೆ" ಎಂದ ಜೆಡಿಎಸ್
‘ಒಂದು ರಾಷ್ಟ್ರ, ಒಂದು ಚುನಾವಣೆ’ ಶಿಫಾರಸನ್ನು ಅಂಗೀಕರಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ನಿರ್ಧಾರ ಭಾರತದ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ “ಐತಿಹಾಸಿಕ ಹೆಜ್ಜೆ” ಎಂದು ಜೆಡಿ(ಎಸ್) ಮುಖಂಡ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಬುಧವಾರ ಶ್ಲಾಘಿಸಿದ್ದಾರೆ.
ಜನತಾ ದಳ(ಜಾತ್ಯತೀತ) 'ಒಂದು ರಾಷ್ಟ್ರ, ಒಂದು ಚುನಾವಣೆ' ವ್ಯವಸ್ಥೆಯನ್ನು ಸ್ವಾಗತಿಸುತ್ತದೆ ಎಂದು ಅವರು ಹೇಳಿದ್ದಾರೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಯನ್ನು ಅನ್ವೇಷಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ನೀಡಿದ ವರದಿಯನ್ನು ಕೇಂದ್ರ ಸಚಿವ ಸಂಪುಟ ಇಂದು ಅಂಗೀಕರಿಸಿದೆ ಎಂದು ಕುಮಾರಸ್ವಾಮಿ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.