ಕುಮಾರಸ್ವಾಮಿ  
ರಾಜಕೀಯ

ನನ್ನನ್ನು ಕೆಣಕಬೇಡಿ, ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳಿವೆ: ಡಿಕೆಶಿಗೆ ಕುಮಾರಸ್ವಾಮಿ ಎಚ್ಚರಿಕೆ

ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಮತ್ತು ಮಾಲಿಕ್ ಕಫೂರ್ ರಾಜ್ಯವನ್ನು ಆಳುತ್ತಿದ್ದಾರೆ. ಅವರು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತಿದ್ದಾರೆ".

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಆಕ್ರಮಣಕಾರರಾದ ಮಹಮ್ಮದ್ ಘೋರಿ, ಮಹಮ್ಮದ್ ಘಜ್ನಿ ಮತ್ತು ಮಾಲಿಕ್ ಕಫೂರ್ ರಾಜ್ಯವನ್ನು ಆಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, "ನಮ್ಮ ರಾಜ್ಯವು ವಿನಾಶದ ಅಂಚಿನಲ್ಲಿದೆ. ಈ ಸರ್ಕಾರದ ಅಕ್ರಮಗಳು, ಲೂಟಿ ಮತ್ತು ದರೋಡೆ ರಾಜ್ಯವನ್ನು ಈ ಹಂತಕ್ಕೆ ತಂದಿದೆ. ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಮತ್ತು ಮಾಲಿಕ್ ಕಫೂರ್ ರಾಜ್ಯವನ್ನು ಆಳುತ್ತಿದ್ದಾರೆ. ಅವರು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತಿದ್ದಾರೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

"ನಾನು ಈ ಸರ್ಕಾರಕ್ಕೆ ಸವಾಲು ಹಾಕುತ್ತೇನೆ. ನಲವತ್ತು ವರ್ಷಗಳ ಹಿಂದೆ, ನಾನು 46 ಎಕರೆ ಭೂಮಿಯನ್ನು ಖರೀದಿಸಿದೆ. ನಾನು ರೈತನಂತೆ ಅದನ್ನು ಪ್ರಾಮಾಣಿಕವಾಗಿ ಬೆಳೆಸಿದ್ದೇನೆ. ನಾಲ್ಕು ದಶಕಗಳಲ್ಲಿ, ಇಂತಹ ದ್ವೇಷಪೂರಿತ ರಾಜಕೀಯ ಮತ್ತು ಅಧಿಕಾರಿ ದುರುಪಯೋಗ ಎಂದಿಗೂ ನೋಡಿಲ್ಲ" ಎಂದರು.

ಸರ್ಕಾರ ಚಾರಿತ್ರ್ಯ ಹರಣಕ್ಕೆ ಇಳಿಯಬಾರದು. ಅತಿಕ್ರಮಣ ನಡೆದರೆ ಕ್ರಮ ಕೈಗೊಳ್ಳಿ. ಆದರೆ ನನ್ನ ಹೆಸರಿಗೆ ಕಳಂಕ ತರಬೇಡಿ. ನಾನು ತಲೆ ಬಾಗುವುದಿಲ್ಲ ಎಂದು ಹೇಳಿದರು.

ರೈತರಿಂದ ಮಾರಾಟ ಪತ್ರಗಳನ್ನು ಸಂಗ್ರಹಿಸಲು ಪೊಲೀಸರನ್ನು ಕೇತಗಾನಹಳ್ಳಿಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದ ಮಾಜಿ ಸಿಎಂ, "ರಾಜ್ಯದ ಇತಿಹಾಸದಲ್ಲಿ ಎಂದಾದರೂ ಇಂತಹ ಘಟನೆ ನಡೆದಿದೆಯೇ?" ಎಂದು ಪ್ರಶ್ನಿಸಿದರು.

ನಾನು ಕನಕಪುರದಲ್ಲಿ ಮಾತ್ರ ಬಂಡೆ ಒಡೆದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಳ್ಳಾರಿಗೂ ನನಗೂ ಏನು ಸಂಬಂಧ ಎನ್ನುತ್ತಿದ್ದಾರೆ. ನನ್ನನ್ನು ಕೆಣಕಬೇಡಿ. ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳು ಇವೆ. ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ ನಾನು, ಇರುವ ಸತ್ಯ ಹೇಳುತ್ತಿದ್ದೇನೆ ಎಂದು ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್ ಗೆ ಎಚ್ಚರಿಕೆ ನೀಡಿದರು.

ಈ ಸರಕಾರಕ್ಕೆ ನಾನು ನೇರವಾಗಿ ಹೇಳುತ್ತಿದ್ದೇನೆ. ನನ್ನ ಮೇಲಷ್ಟೇ ರಾಜಕೀಯ ಹಗೆತನ ಸಾಧಿಸುತ್ತಿರುವುದು ಅಷ್ಟೇ ಅಲ್ಲ, ರಾಜ್ಯದ ಜನರನ್ನು ಕಿತ್ತು ತಿನ್ನುತ್ತಿರುವ ಈ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡುತ್ತಿದ್ದೇನೆ. ಸವಾಲು ಹಾಕಲು ಇಲ್ಲಿಗೆ ಬಂದಿದ್ದೇನೆ. ಇಂದಿನಿಂದ ಈ ಜನ ವಿರೋಧಿ ಸರ್ಕಾರದ ವಿರುದ್ಧ ನೇರ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ಹೆಚ್‌ ಡಿ ಕುಮಾರಸ್ವಾಮಿ ಅವರು ಗುಡುಗಿದರು.

2003- 2004ರಲ್ಲಿ ಅವರು ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಅದಿರಿನ ಮಣ್ಣಿನ ನೆಪದಲ್ಲಿ ಸಾವಿರಾರು ಟನ್ ಕಬ್ಬಿಣದ ಅದಿರನ್ನು ಬಳ್ಳಾರಿಯಲ್ಲಿ ಕದ್ದು ಸಾಗಿಸಿದರು. ಆ ಅದಿರು ಎಲ್ಲಿಗೆ ಹೋಯಿತು? ಏನು ಮಾಡಿದರು. ಅವರು ಯಾರಿಗೆಲ್ಲ ಪತ್ರ ಬರೆದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ ಎಂದು ಡಿಕೆ ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು 2016-17ರ ನೀತಿಯನ್ನು ಉಲ್ಲೇಖಿಸಿ, ಸಿದ್ದರಾಮಯ್ಯ ಅವರು ಎಸ್‌ಸಿ-ಎಸ್‌ಟಿ ಯುವ ಗುತ್ತಿಗೆದಾರರಿಗೆ 50 ಲಕ್ಷ ರೂ.ಗಳವರೆಗೆ ಸರ್ಕಾರಿ ಟೆಂಡರ್‌ಗಳಲ್ಲಿ ಮೀಸಲಾತಿಯನ್ನು ಪರಿಚಯಿಸಿದ್ದಾರೆ. ಸಿದ್ದರಾಮಯ್ಯ ಅವರೇ ನೀವು ಒಬಿಸಿಗಳು, ಎಸ್‌ಸಿಗಳು ಮತ್ತು ಎಸ್‌ಟಿಗಳನ್ನು ಉನ್ನತೀಕರಿಸಿದ್ದೇನೆ ಎಂದು ಹೇಳುತ್ತೀರಿ. ಆದರೆ ಅದರ ಡೇಟಾವನ್ನು ಬಿಡುಗಡೆ ಮಾಡಿ. ಎಷ್ಟು ಕುಟುಂಬಗಳು ನಿಜವಾಗಿಯೂ ಪ್ರಯೋಜನ ಪಡೆದಿವೆ ಎಂಬುದನ್ನು ತೋರಿಸಿ. ಶ್ವೇತಪತ್ರವನ್ನು ಪ್ರಕಟಿಸಿ" ಎಂದು ಆಗ್ರಹಿಸಿದರು.

ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಎಲ್ಲಾ ಪಕ್ಷಗಳು ಸಾಮಾಜಿಕ ಮಾಧ್ಯಮದಲ್ಲಿ ಬರೆಯುತ್ತವೆ. ಕೆಟ್ಟದಾಗಿ ಪೋಸ್ಟ್ ಮಾಡುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ

"ಬಿಜೆಪಿ ಅಥವಾ ಜೆಡಿ-ಎಸ್ ಕಾರ್ಯಕರ್ತರು ಸರ್ಕಾರವನ್ನು ಟೀಕಿಸುವ ಯಾವುದೇ ಪೋಸ್ಟ್ ಹಾಕಿದರೆ, ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಗುತ್ತದೆ. ಇದು ವಾಸ್ತವ" ಎಂದರು.

ಬೆಂಗಳೂರಿನಲ್ಲಿ ಕಸ ವಿಲೇವಾರಿ ಕುರಿತು ಮಾತನಾಡಿದ ಕೇಂದ್ರ ಸಚಿವರು, ಕಾಂಗ್ರೆಸ್ ಸರ್ಕಾರ ಕಸ ವಿಲೇವಾರಿಗಾಗಿ ಪ್ರತಿ ಟನ್‌ಗೆ 6,000 ರೂ. ನಿಗದಿಪಡಿಸಿ 30 ವರ್ಷಗಳ ಒಪ್ಪಂದವನ್ನು ಬೆರೆಯವರಿಗೆ ಹಸ್ತಾಂತರಿಸಲು ಯೋಜಿಸಿತ್ತು. ಆದರೆ ನಾನು ಧ್ವನಿ ಎತ್ತಿದ ನಂತರ, ಈ ದರವನ್ನು ಪ್ರತಿ ಟನ್‌ಗೆ 3,000 ರೂ.ಗೆ ಇಳಿಸಲಾಯಿತು ಮತ್ತು ಟೆಂಡರ್ ಅನ್ನು ಹಿಂತೆಗೆದುಕೊಳ್ಳಲಾಯಿತು ಎಂದರು.

ರಾಜ್ಯ ಸರ್ಕಾರ ತೆರಿಗೆ ಹಣವನ್ನು ಬಳಸಿಕೊಂಡು ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಆದರೆ ತಮಿಳುನಾಡಿಗೆ ನೀರು ಬಿಡುತ್ತಿದೆ. ನಾವು ಕನ್ನಡಿಗರು ಇತರ ರಾಜ್ಯಗಳಿಗೆ ನೀರು ಹರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಕಾವೇರಿ ವಿಷಯದಲ್ಲಿ ನಮಗೆ ಅನ್ಯಾಯವಾಗಿದೆ. ನಮ್ಮ ರಾಜ್ಯವು ಯಾವಾಗಲೂ ಹಿಂದುಳಿದಿದೆ. ಪದೇ ಪದೇ, ನೆರೆಯ ರಾಜ್ಯಗಳು ನಮಗಿಂತ ಹೆಚ್ಚು ಪ್ರಯೋಜನ ಪಡೆದಿವೆ. ನೀರಿಗೆ ಸಂಬಂಧಿಸಿದ ವಿಷಯಗಳಲ್ಲಿಯೂ ಸಹ ಕನ್ನಡಿಗರಲ್ಲಿ ಒಗ್ಗಟ್ಟು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT