ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಪಕ್ಷದ ಈ ನಡೆಯನ್ನು ಬಿಜೆಪಿ ಟೀಕಿಸಿದೆ.
ಬಿಜೆಪಿ ಸಂಸದ ಪಿಸಿ.ಮೋಹನ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿನ ಹೀನಾಯ ಸೋಲನ್ನು ಮರೆಮಾಚಲು ಹತಾಶ ಯತ್ನ ನಡೆಸತ್ತಿದ್ದಾರೆಂದು ಟೀಕಿಸಿದ್ದಾರೆ.
ವಂಶಪಾರಂಪರ್ಯದ ಪರವಲ್ಲದೆ, ಮಹದೇವಪುರ ಮತ್ತು ರಾಜಾಜಿನಗರದ ಜನರು ಅಭಿವೃದ್ಧಿಗೆ ಮತ ಹಾಕಿದ್ದಾರೆ. ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರ ಬಳಿ ಶೇ.100ರಷ್ಟು ಪುರಾವೆ ಇರುವುದೇ ಆದರೆ, ಬೆಂಗಳೂರಿನಲ್ಲಿ ಬೀದಿ ನಾಟಕ ಮಾಡುವ ಬದಲು ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಸವಾಲು ಹಾಕಿದ್ದಾರೆ.
ಜನರ ನಂಬಿಕೆಯನ್ನು ಕಳೆದುಕೊಂಡ ನಂತರ ಸುಳ್ಳುಗಳನ್ನು ಹರಡುವುದು ಪ್ರಜಾಪ್ರಭುತ್ವವಲ್ಲ. ಈ ಪ್ರತಿಭಟನೆ ಹತಾಶ ಪ್ರಯತ್ನವಾಗಿದೆ. ಮಹಾದೇವಪುರ ಮತ್ತು ರಾಜಾಜಿನಗರದ ಜನಾದೇಶವನ್ನು ಯಾವುದೇ ನಕಲಿ ನಿರೂಪಣೆಯು ದುರ್ಬಲಗೊಳಿಸಲು ಸಾಧ್ಯವಿಲ್ಲ. ಯಾವುದೇ ಅಪಪ್ರಚಾರವು ಮತಪತ್ರದ ತೀರ್ಪನ್ನು ಪುನಃ ಬರೆಯಲು ಸಾಧ್ಯವಿಲ್ಲ. ಬೀದಿ ಪ್ರದರ್ಶನಗಳನ್ನು ನಡೆಸುವ ಬದಲು ಕಾಂಗ್ರೆಸ್ ಜನಾದೇಶವನ್ನು ಗೌರವಿಸಬೇಕು ಎಂದು ತಿರುಗೇಟು ನೀಡಿದ್ದಾರೆ.