ಮಹದೇವಪ್ಪ ಹಾಗೂ ಆರ್.ಅಶೋಕ್ 
ರಾಜಕೀಯ

KRS ಜಲಾಶಯಕ್ಕೆ ಟಿಪ್ಪು ಸುಲ್ತಾನನ ಹೆಸರಿಟ್ಟು TS ಜಲಾಶಯ ಎಂದು ಮರುನಾಮಕರಣ ಮಾಡುವ ಹುನ್ನಾರ ನಡೆಯುತ್ತಿದೆಯೇ?

ನಾಡದ್ರೋಹಿ, ಮತಾಂಧ ಟಿಪ್ಪು ಸುಲ್ತಾನ ಸತ್ತಿದ್ದು 1799ರಲ್ಲಿ. ಮೈಸೂರು ಭಾಗದ ಗ್ರಾಮೀಣ ಜನರ ನಾಲಿಗೆಯ ಮೇಲೆ ಇಂದಿಗೂ ಕನ್ನಂಬಾಡಿ ಕಟ್ಟೆ ಎಂದೇ ಕರೆಸಿಕೊಳ್ಳುವ KRS ಜಲಾಶಯದ ಕಾಮಗಾರಿ ಪ್ರಾರಂಭವಾದದ್ದು 1911ರಲ್ಲಿ.

ಬೆಂಗಳೂರು: ಕೃಷ್ಣರಾಜ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ಕೆಆರ್'ಎಶ್ ಜಲಾಶಯಕ್ಕೆ ಮತಾಂಧ ಟಿಪ್ಪು ಸುಲ್ತಾನನ ಹೆಸರಿಟ್ಟು ಟಿಎಸ್ ಜಲಾಶಯ ಎಂದು ಮರುನಾಮಕರಣ ಮಾಡುವ ಹುನ್ನಾರ ನಡೆಯುತ್ತಿದೆಯೇ? ಎಂದು ಅನುಮಾನ ವ್ಯಕ್ತಪಡಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಮಹದೇವಪ್ಪ ಅವರ ಹೇಳಿಕೆ ಕುರಿತು ತೀವ್ರವಾಗಿ ಕಿಡಿಕಾರಿದ್ದಾರೆ.

ನಾಡದ್ರೋಹಿ, ಮತಾಂಧ ಟಿಪ್ಪು ಸುಲ್ತಾನ ಸತ್ತಿದ್ದು 1799ರಲ್ಲಿ. ಮೈಸೂರು ಭಾಗದ ಗ್ರಾಮೀಣ ಜನರ ನಾಲಿಗೆಯ ಮೇಲೆ ಇಂದಿಗೂ ಕನ್ನಂಬಾಡಿ ಕಟ್ಟೆ ಎಂದೇ ಕರೆಸಿಕೊಳ್ಳುವ ಕೆಆರ್ ಎಸ್ ಜಲಾಶಯದ ಕಾಮಗಾರಿ ಪ್ರಾರಂಭವಾದದ್ದು 1911ರಲ್ಲಿ. 1799ರಲ್ಲಿ ಸತ್ತ ಮತಾಂಧ ಟಿಪ್ಪು ಸುಲ್ತಾನನಿಗೂ, ಅವನು ಸತ್ತ ಮೇಲೆ ಸರಿಸುಮಾರು 112 ವರ್ಷ ಆದಮೇಲೆ ಕಾಮಗಾರಿ ಪ್ರಾರಂಭವಾದ ಕನ್ನಂಬಾಡಿ ಕಟ್ಟೆಗೂ ಏನು ಸಂಬಂಧ ಸಚಿವ ಮಹದೇವಪ್ಪ ಅವರೇ? ನಿಮ್ಮ ಬಾಲಿಶ ಹೇಳಿಕೆ ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇತಿಹಾಸ ಸ್ವಲ್ಪ ಓದಿಕೊಳ್ಳಿ. ಮದ್ರಾಸ್‌ನ ಬ್ರಿಟಿಷ್ ಪ್ರಾಂತೀಯ ಸರ್ಕಾರ ಒಪ್ಪಿಗೆ ನೀಡಿದ್ದು 80 ಅಡಿ ಎತ್ತರದ ಅಣೆಕಟ್ಟೆಗೆ. ಆದರೆ ಮಹಾರಾಜರು 124 ಅಡಿ ಎತ್ತರದ ಅಣೆಕಟ್ಟೆ ನಿರ್ಮಿಸುವ ಯೋಜನೆ ರೂಪಿಸಿದರು. ಪ್ರಾರಂಭಿಕ ಅಂದಾಜು ವೆಚ್ಚ 2 ಕೋಟಿ 35 ಲಕ್ಷ ರೂ. ಅಂದಿನ ರಾಜ್ಯದ ಆದಾಯವನ್ನೆಲ್ಲ ಇದೊಂದಕ್ಕೇ ಬಳಸುವುದು ಸಾಧ್ಯವಿರಲಿಲ್ಲ. ಆಗ ಕೃಷ್ಣರಾಜ ಒಡೆಯರ್ ಮತ್ತು ರಾಜಮಾತೆಯವರು ತೆಗೆದುಕೊಂಡ ತೀರ್ಮಾನ ಅಪೂರ್ವವಾದದ್ದು. ಅರಮನೆಯ ಖಾಸಗಿ ಭಂಡಾರದಲ್ಲಿದ್ದ ನಾಲ್ಕು ಮೂಟೆಗಳಷ್ಟು ವಜ್ರ, ವೈಢೂರ್ಯ, ಚಿನ್ನಾಭರಣಗಳು ಮತ್ತು ಬೆಳ್ಳಿ ನಾಣ್ಯಗಳನ್ನು ಮುಂಬಯಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬಂದ ಹಣವನ್ನು ಕನ್ನಂಬಾಡಿಯ ಕಟ್ಟೆ ನಿರ್ಮಾಣಕ್ಕೆ ವಿನಿಯೋಗಿಸಿದರು.

ಕನ್ನಂಬಾಡಿ ಕಟ್ಟೆ ಎಂದೊಡನೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೆನಪಾಗುತ್ತಾರೆ. ಆದ್ದರಿಂದಲೇ ಕನ್ನಂಬಾಡಿ ಕಟ್ಟೆಗೆ ''ಕೃಷ್ಣರಾಜ ಸಾಗರ" ಎಂಬ ಹೆಸರು ಇಡುವ ಮೂಲಕ ಅವರ ಹೆಸರನ್ನು ಸ್ಮರಿಸಲಾಗಿದೆ. ಈಗ ಕಾಂಗ್ರೆಸ್ ಸರ್ಕಾರದ ವರಸೆ ನೋಡುತ್ತಿದ್ದರೆ ಕೆ ಆರ್ ಎಸ್ ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಹುನ್ನಾರ ನಡೆಯುತ್ತಿದೆ ಎನ್ನಿಸುತ್ತಿದೆ.

ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಸಿದ್ದರಾಮಯ್ಯನವರು ನಾಲ್ವಡಿ ಅವರಿಗಿಂತ ದೊಡ್ಡವರು ಎನ್ನುವಂತೆ ಮಾತನಾಡಿ ನಾಲ್ವಡಿ ಅವರಿಗೆ ಅಪಮಾನ ಮಾಡಿದರು. ಈಗ ಸಿದ್ದರಾಮಯ್ಯನವರ ಆಪ್ತ ಸಚಿವ ಮಹದೇವಪ್ಪನವರು ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಹಾಕಿದ್ದು ಮತಾಂಧ ಟಿಪ್ಪು ಸುಲ್ತಾನ ಎಂದು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಮತ್ತೊಮ್ಮೆ ಅಪಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ವಲಯದಿಂದ ಕೇಳಿಬರುತ್ತಿರುವ ಈ ಹೇಳಿಕೆಗಳನ್ನು ಗಮನಿಸಿದರೆ ಮೈಸೂರು ರಾಜಮನೆತನದ ತೇಜೋವಧೆ ಮಾಡುವ, ಆ ಮನೆತನದ ಗೌರವಕ್ಕೆ ಮಸಿ ಬಳಿಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಅನ್ನಿಸುತ್ತಿದೆ.

ನಾಲ್ವಡಿ ಕೃಷ್ಣರಾಜ ಒಡೆಯರು ಆಧುನಿಕ ಮೈಸೂರಿನ ಮಹಾಶಿಲ್ಪಿ ಎಂದೇ ಅವರ ಹೆಸರು ಇತಿಹಾಸದಲ್ಲಿ ದಾಖಲಾಗಿದೆ. ಮೈಸೂರು ಸೀಮೆಯ ಜನರಿಗೆ ಅವರು ಇಂದಿಗೂ ಪ್ರಾತಃಸ್ಮರಣೀಯರು. ಹಿಂದುಳಿದ ಜನಾಂಗಗಳು, ದಲಿತರು, ಬಡಬಗ್ಗರ ಬಗ್ಗೆ ಅಪಾರ ಕಾಳಜಿ ಇದ್ದ ಅವರ ಬಗ್ಗೆ ಮೈಸೂರು ಪ್ರಾಂತ್ಯದ ಜನರಿಗೆ ಈಗಲೂ ಅಪಾರ ಗೌರವ. ರೈತರ ಪಾಲಿಗೆ ಅವರು ಅನ್ನದಾತ. ಇಂತಹ ಮೇರು ವ್ಯಕ್ತಿತ್ವದ ನಾಲ್ವಡಿ ಅವರಿಗೆ ಮಸಿ ಬಳಿಯುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ. ಮೈಸೂರು ರಾಜಮನೆತನದ ತಂಟೆಗೆ ಬಂದ ಯಾರೂ ಇದುವರೆಗೂ ಉದ್ಧಾರ ಆಗಿಲ್ಲ. ಕಾಂಗ್ರೆಸ್ ನಾಯಕರು ಇದನ್ನ ನೆನಪಿಟ್ಟುಕೊಳ್ಳಬೇಕು. ತಮ್ಮ ಕ್ಷುಲ್ಲಕ ರಾಜಕೀಯಕ್ಕೆ ಮೈಸೂರು ರಾಜಮನೆತನದ ಹೆಸರನ್ನು ಪದೇ ಪದೇ ಎಳೆದು ತಂದು ಅಪಮಾನ ಮಾಡಿದರೆ ಈ ನಾಡಿನ ಜನತೆ ಸಹಿಸುವುದಿಲ್ಲ, ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಂಚ ಪಡೆಯುತ್ತಿದ್ದ ಸಚಿವ ಕೆ.ಜೆ. ಜಾರ್ಜ್‌ OSD ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ: ಸಿಎಂ ಸಿದ್ದರಾಮಯ್ಯ

11 ಮಕ್ಕಳ ಸಾವು: ಕೇರಳದಲ್ಲೂ ಕೋಲ್ಡ್ರಿಫ್ ಸಿರಪ್ ಮಾರಾಟ, ವಿತರಣೆ ನಿಷೇಧ

ಎಂಎಂ ಹಿಲ್ಸ್‌ನಲ್ಲಿ ಮತ್ತೊಂದು ಹುಲಿಗೆ ವಿಷಪ್ರಾಶನ; ಇಬ್ಬರು ಶಂಕಿತರು ವಶಕ್ಕೆ

ತಮಿಳುನಾಡಿನಲ್ಲಿ ಬದಲಾದ ರಾಜಕೀಯ ಸಮೀಕರಣ: ವಿಜಯ್ ಜೊತೆ ಬಿಜೆಪಿ ಮಾತುಕತೆ? ಕಾಲ್ತುಳಿತ ಘಟನೆಯ ನಂತರ TVKಗೆ ಪ್ರಮುಖ ಭರವಸೆ?

SCROLL FOR NEXT