ಬೆಂಗಳೂರು: ಅಹಿಂದ.... ಅಹಿಂದ.... ಎನ್ನುತ್ತಲೇ ಅಧಿಕಾರದ ಆಸೆಗೆ ಹಿಂದುಳಿದ ದಲಿತ ನಾಯಕರನ್ನು ತುಳಿಯುತ್ತಿರುವ ಮಜವಾದಿ ಸಿದ್ದರಾಮಯ್ಯ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಜೆಡಿಎಸ್ , ಮುಖ್ಯಮಂತ್ರಿಗಳೇ ನಿಮ್ಮ ಅಧಿಕಾರದ ದುರಾಸೆಗೆ ವಾಲ್ಮೀಕಿ ಸಮುದಾಯದ ಮತ್ತೊಬ್ಬ ದಲಿತ ನಾಯಕನನ್ನು ಬಲಿಕೊಟ್ಟಿದ್ದೀರಿ. ಪರಮಾಪ್ತ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿದ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದೆ.
ಹಿಂದೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಲೂಟಿ ಹೊಡೆದು ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಯಲ್ಲಿ ಅಕ್ರಮವಾಗಿ ಹಣ ಬಳಸಿಕೊಂಡು, ಬಿ. ನಾಗೇಂದ್ರ ಅವರನ್ನು ಬಲಿಪಶು ಮಾಡಿ ಜೈಲಿಗೆ ಅಟ್ಟಿದಿರಿ. ಈಗ ಮತಗಳ್ಳತನದ ಬಗ್ಗೆ ಸುಳ್ಳು ಆರೋಪ ಮಾಡಿರುವ ರಾಹುಲ್ ಗಾಂಧಿಯನ್ನು ಮೆಚ್ಚಿಸಲು, ಸತ್ಯ ಹೇಳುವವರ ಬಾಯಿ ಮುಚ್ಚಿಸಲು ರಾಜಣ್ಣ ಅವರ ತಲೆದಂಡ ಮಾಡಲಾಗಿದೆ.
ಹಿಂದುಳಿದ ವರ್ಗಗಳ ನೇತಾರ ದಿ.ದೇವರಾಜ್ ಅರಸು ಅವರ ದಾಖಲೆಯನ್ನು ಮುರಿಯಬೇಕು ಎಂಬ ಹಪಾಹಪಿಯಲ್ಲಿರುವ ಸಿದ್ದರಾಮಯ್ಯ, ದಲಿತ ನಾಯಕರಿಗೆ ಚೂರಿ ಹಾಕಲು ಹಿಂಜರಿಯುವುದಿಲ್ಲ ಎಂಬುದಕ್ಕೆ ರಾಜಣ್ಣಗೆ ಆಗಿರುವ ಈ ಘೋರ ಅನ್ಯಾಯವೇ ಸಾಕ್ಷಿ. ರಾಜಣ್ಣ ಮಾಡಿದ ಅಪರಾಧವಾದರೂ ಏನು ? ಸಿದ್ದರಾಮಯ್ಯ ಅವರೇ, ದಲಿತ ಸಮುದಾಯಕ್ಕೆ ವಂಚಿಸಿ ಅಧಿಕಾರದಲ್ಲಿ ಮುಂದುವರಿಯಲು ನಿಮ್ಮ ಆತ್ಮಸಾಕ್ಷಿಯಾದರೂ ಹೇಗೆ ಒಪ್ಪುತ್ತದೆ ? ಎಂದು ಜೆಡಿಎಸ್ ಪ್ರಶ್ನಿಸಿದೆ.