ಬೆಂಗಳೂರು: ಕೊಪ್ಪಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆಯ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ಬಿಜೆಪಿ ಬುಧವಾರ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದೆ.
ಈ ಹತ್ಯೆಯ ಹಿಂದೆ ಜಿಹಾದಿ ಉಗ್ರಗಾಮಿ ಸಂಘಟನೆಗಳ "ಪಿತೂರಿ" ಇದೆ ಎಂದು ಆರೋಪಿಸಿರುವ ಬಿಜೆಪಿ, ಪ್ರಕರಣದ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಹಿಂದೂ ಸಂಘಟನೆಯ ಕಾರ್ಯಕರ್ತ, ವಾಲ್ಮೀಕಿ ಸಮುದಾಯದ ಗವಿಸಿದ್ದಪ್ಪ ನಾಯಕ್ ಅವರನ್ನು ಆಗಸ್ಟ್ 3 ರಂದು ಕೊಪ್ಪಳ ಪಟ್ಟಣದ ಸೈಯದ್ ನದೀಮುಲ್ಲಾ ಖಾದ್ರಿ ಮಸೀದಿಯ ಮುಂದೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ಶಾಸಕರು ಇಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಈ ಕೊಲೆಯ ಹಿಂದೆ ಪಿಎಫ್‌ಐ ಮತ್ತು ಎಸ್‌ಡಿಪಿಐನ ಪಾತ್ರ ಇದೆ ಮತ್ತು ಕಾಂಗ್ರೆಸ್ ಸರ್ಕಾರವು "ಉಗ್ರರ ಬಗ್ಗೆ ಮೃದು ದೋರಣೆ" ಹೊಂದಿದೆ ಎಂದು ಬಿಜೆಪಿ ಆರೋಪಿಸಿದೆ.
"ಆಗಸ್ಟ್ 3, 2025 ರಂದು ಗವಿಸಿದ್ದಪ್ಪ ನಾಯಕ್ ಅವರ ಬರ್ಬರ ಹತ್ಯೆಯಿಂದಾಗಿ ಕೊಪ್ಪಳದಲ್ಲಿ ಶಾಂತಿ ಮತ್ತು ನೆಮ್ಮದಿ ಕದಡಿದೆ. ಕೊಪ್ಪಳ ಪಟ್ಟಣದ ಹೃದಯ ಭಾಗದಲ್ಲಿರುವ ಮಸೀದಿಯ ಮುಂದೆ ಸಂಜೆ 7.30 ರಿಂದ ರಾತ್ರಿ 8 ಗಂಟೆಯ ನಡುವೆ ಈ ಕೊಲೆ ನಡೆದಿದೆ" ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಮುಖ ಆರೋಪಿ ಸಾದಿಕ್ ಕೋಲ್ಕರ್ ಕೊಲೆಗೆ ಒಂದು ದಿನ ಮೊದಲು ಕೊಪ್ಪಳದಲ್ಲಿ ಕತ್ತಿ ಮತ್ತು ಮಚ್ಚುಗಳೊಂದಿಗೆ ಬಹಿರಂಗವಾಗಿ ಮೆರವಣಿಗೆ ನಡೆಸಿದ್ದ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ.
"ಪೊಲೀಸರು ಅದೇ ದಿನ ಮುನ್ನೆಚ್ಚರಿಕೆ ಕ್ರಮವಾಗಿ ಸಾದಿಕ್ ನನ್ನು ಬಂಧಿಸಿದ್ದರೆ ಬಹುಶಃ ಈ ಕೊಲೆ ತಡೆಯಬಹುದಿತ್ತು. ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ. ಅವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಕೊಲೆ ನಡೆದಿದೆ ಎಂದು" ಎಂದು ಬಿಜೆಪಿ ಆರೋಪಿಸಿದೆ.
ಈ ಕೊಲೆಯ ಸ್ವರೂಪ - ಶಿರಚ್ಛೇದ ಮತ್ತು ಕತ್ತು ಸೀಳುವಿಕೆ - ಕರಾವಳಿ ಕರ್ನಾಟಕದ ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ಹೋಲುತ್ತದೆ ಎಂದು ಬಿಜೆಪಿ ಆರೋಪಿಸಿದೆ.
"ಕರ್ನಾಟಕದ ಬೇರೆಡೆ ಕಾರ್ಯನಿರ್ವಹಿಸುತ್ತಿರುವ ಜಿಹಾದಿ ಪಡೆಗಳ ದುಷ್ಕೃತ್ಯಗಳನ್ನು" ಬಯಲು ಮಾಡಲು NIA ತನಿಖೆ ಅಗತ್ಯ ಎಂದು ಬಿಜೆಪಿ ಶಾಸಕರು ವಾದಿಸಿದ್ದಾರೆ.