ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ, ಬದಲಿಗೆ ತೆರಿಗೆ ಭಯೋತ್ಪಾದನೆಯಲ್ಲಿ ನಿರತವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಬುಧವಾರ ಟೀಕಿಸಿದ್ದಾರೆ.
ವಿಧಾನಸಭೆಯಲ್ಲಿ ‘ಅನುದಾನ, ಅಭಿವೃದ್ಧಿ’ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 27 ತಿಂಗಳಲ್ಲಿ 25 ರೀತಿಯ ತೆರಿಗೆ ವಿಧಿಸಿದೆ. ಹಾಲಿನ ದರ ದುಪ್ಪಟ್ಟಾಗಿದೆ, ಕಸದ ಮೇಲೂ ಸೆಸ್ ವಿಧಿಸಲಾಗಿದೆ, ಪೆಟ್ರೋಲ್ ದರ ಏರಿಸಲಾಗಿದೆ, ಬಸ್ ಪ್ರಯಾಣ ಹೆಚ್ಚಳವಾಗಿದೆ, ಕಾವೇರಿ ನೀರಿನ ದರವೂ ಹೆಚ್ಚಳವಾಗಿದೆ, ಬಡವರು ಕುಡಿಯವ ಮದ್ಯದ ದರ ಶೇ.200 ಏರಿಕೆಯಾಗಿದೆ. ಒಟ್ಟಾರೆಯಾಗಿ ಬೆಲೆ ಏರಿಸಿ ರಾಜ್ಯದ ಜನರಿಗೆ ಆರ್ಥಿಕ ಹೊರೆ ಹೊರಿಸಿದೆ. ಈ ಮೂಲಕ ಮೂಲಕ ತೆರಿಗೆ ಭಯೋತ್ಪಾದನೆ ಸೃಷ್ಟಿಸಿದೆ ಎಂದು ಕಿಡಿಕಾರಿದರು.
ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಅನುದಾನ ಸಿಗದಿರುವ ಕುರಿತು ಕೇವಲ ವಿಪಕ್ಷದ ನಾಯಕರಷ್ಟೇ ಅಲ್ಲ, ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಕೂಡ ಧ್ವನಿ ಎತ್ತುತ್ತಿದ್ದಾರೆ. ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿದರು.
ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಂತಾಗಿದೆ. ರಸ್ತೆಗಳನ್ನು ದುರಸ್ತಿ ಮಾಡಲು ಕೂಡ ಸರ್ಕಾರದ ಬಳಿ ಹಣವಿಲ್ಲ. ವಿಧಾನಸೌಧ ಮತ್ತು ಅದರ ಸುತ್ತಮುತ್ತಲಿನ ರಸ್ತೆಗಳಲ್ಲಿಯೇ 1,000 ಕ್ಕೂ ಹೆಚ್ಚು ಗುಂಡಿಗಳಿವೆ. ಸರ್ಕಾರ ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳುತ್ತಿದೆ. ಆದರೆ, ನಗರ ಬ್ಯಾಡ್ ಬೆಂಗಳೂರು ಆಗಿ ಮಾರ್ಪಟ್ಟಿದೆ ಎಂದು ತಿಳಿಸಿದರು.
ಸುರಂಗ ರಸ್ತೆ ಯೋಜನೆ ಬಗ್ಗೆ ಮಾತನಾಡಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಯೋಜನೆಗೆ 17,000 ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ಹೇಳಿದ್ದರು. ಇದು ಮತ್ತೊಂದು ಎತ್ತಿನಹೊಳೆ ಯೋಜನೆಯಂತೆ ಆಗುತ್ತದೆ. ಯೋಜನೆಗೆ 1 ಲಕ್ಷ ಕೋಟಿ ರೂ. ಬೇಕಾಗಬಹುದು. ಪ್ರಸ್ತುತ, 16.5 ಕಿ.ಮೀ. ಉದ್ದದ ರಸ್ತೆಗೆ ನೀವು 700 ರೂ. ಟೋಲ್ ಶುಲ್ಕವನ್ನು ನಿಗದಿಪಡಿಸಲು ಬಯಸುತ್ತೀರಿ, ಸುರಂಗ ರಸ್ತೆಯ ವೆಚ್ಚ ಹೆಚ್ಚಾದರೆ, ನೀವು ಟೋಲ್ ಶುಲ್ಕವನ್ನು ಹೆಚ್ಚಿಸುತ್ತೀರಿ. ಅದನ್ನು ಯಾರು ಬಳಸುತ್ತಾರೆ. ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.