ಬೆಳಗಾವಿ: ಆಂತರಿಕ ಕಲಹದಿಂದಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಪತನಗೊಳ್ಳಲಿದೆ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅನೇಕ ನಾಯಕರು ವೈಯಕ್ತಿಕವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದರೂ,ತಮ್ಮ ಪಕ್ಷದ ತುಷ್ಟೀಕರಣ ರಾಜಕೀಯದಿಂದಾಗಿ, ವಿಶೇಷವಾಗಿ ಮುಸ್ಲಿಮರನ್ನು ಮೆಚ್ಚಿಸಲು ಅದನ್ನು ಸಾರ್ವಜನಿಕವಾಗಿ ವಿರೋಧಿಸುತ್ತಾರೆಂದು ಹೇಳಿದರು.
ಆರ್‌ಎಸ್‌ಎಸ್ ಹಿಂದೂ ಸಮಾಜವನ್ನು ಒಗ್ಗೂಡಿಸಲು ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಬದ್ಧವಾಗಿರುವ ಸಂಘಟನೆಯಾಗಿದೆ. ಕಾಂಗ್ರೆಸ್ ನಾಯಕರು ವೈಯಕ್ತಿಕವಾಗಿ ಆರ್‌ಎಸ್‌ಎಸ್ ಅನ್ನು ಗೌರವಿಸುತ್ತಿದ್ದರೂ, ತಮ್ಮ ಪಕ್ಷದ ಮುಖ್ಯಸ್ಥರನ್ನು ಮೆಚ್ಚಿಸಲು ಟೀಕಿಸುತ್ತಿದ್ದಾರೆಂದು ತಿಳಿಸಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಆರ್‌ಎಸ್‌ಎಸ್ ಗೀತೆಯನ್ನು ಹಾಡಿರುವುದನ್ನು ಉಲ್ಲೇಖಿಸಿದ ಅವರು, ಶಿವಕುಮಾರ್ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಲಿಲ್ಲ, ಬದಲಿಗೆ ಕ್ಷಮೆಯಾಚಿಸಿದರು. ಇದು ಅವರ (ಶಿವಕುಮಾರ್) ದ್ವಂದ್ವ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ತನ್ನ ಓಲೈಕೆ ಮತ್ತು ಮತ ಬ್ಯಾಂಕ್ ರಾಜಕೀಯದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಸ್ತಿತ್ವತೆಯನ್ನು ಕಳೆದುಕೊಂಡಿದೆ. ಉಳಿದಿರುವ ಅಲ್ಪಸಂಖ್ಯಾತ ಸಮುದಾಯಗಳ ವಿಶ್ವಾಸವನ್ನೂ ಭವಿಷ್ಯದಲ್ಲಿ ಕಳೆದುಕೊಳ್ಳಲಿದೆ ಎಂದರು.
ಕಾಂಗ್ರೆಸ್‌ನಲ್ಲಿ ನಾಯಕತ್ವದ ವಿಷಯದ ಕುರಿತು ಮಾತನಾಡಿ, ಕಾಂಗ್ರೆಸ್ ನಲ್ಲಿ ಇನ್ ಫೈಟಿಂಗ್ ನಡೆಯುತ್ತಿದೆ. ಸಿದ್ದರಾಮಯ್ಯ ಅವರನ್ನ ಇಳಿಸಬೇಕು ಎಂದು ಪ್ಲ್ಯಾನ್ ನಡೆದಿದೆ. ಡಿಕೆಶಿ ಮುಖ್ಯಮಂತ್ರಿ ಆಗುವ ಪ್ರಯತ್ನ ನಡೆದಿದೆ. ಅವರು ಸಿಎಂ ಆಗಲು ಹೋದರೆ ಸಿದ್ದರಾಮಯ್ಯ ಸುಮ್ಮನೆ ಕೂರಲ್ಲ. ಜೊತೆಗೆ ಇನ್ ಫೈಟಿಂಗ್ ನಡೆದಿದ್ದು, ಯಾವಾಗ ಬೇಕಾದರೂ ಸರ್ಕಾರ ಬೀಳಬಹುದು. ಕರ್ನಾಟಕದಲ್ಲಿ ಯಾರಾದರೂ ಏಕನಾಥ ಶಿಂಧೆ ಆಗಬಹುದು. ನಾವು ಆಪರೇಷನ್ ಕಮಲ ಮಾಡಲು ಹೊರಟಿಲ್ಲ. ನಾವು ಅವರಿಗೆ ಅರಿಶಿನ ಕುಂಕುಮ ಕೊಟ್ಟಿಲ್ಲ. ಅವರ ಆಂತರಿಕ ಜಗಳವೇ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಬಳಿಕ ಬಾನು ಮುಷ್ತಾಕ್ ಅವರು ಮೈಸೂರಿನಲ್ಲಿ ದಸರಾ ಉದ್ಘಾಟಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಕನ್ನಡ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಅವರು ಮಾಡಿದ ಹಿಂದಿನ ಹೇಳಿಕೆಗಳೇ ಈ ವಿರೋಧಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ನಿಸಾರ್ ಅಹ್ಮದ್ ಅವರನ್ನು ಎಳೆದು ತರಬಾರದು ಎಂದು ಸ್ಪಷ್ಟಪಡಿಸಿದರು