ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಕದನ ಇನ್ನೂ ಮುಗಿದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸುತ್ತಿರುವ ನಡುವಲ್ಲೇ ಕಾಂಗ್ರೆಸ್ ಶಾಸಕರೊಬ್ಬರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಜೇವರ್ಗಿಯ ಕಾಂಗ್ರೆಸ್ ಶಾಸಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ಅಜಯ್ ಸಿಂಗ್ ಅವರು ನೀಡಿರುವ ಹೇಳಿಕೆ, ಭಾರೀ ಕುತೂಹಲ ಕೆರಳಿಸಿದೆ. ಡಿಸೆಂಬರ್ 19 ರಂದು ಬೆಳಗಾವಿಯಲ್ಲಿ ಮುಕ್ತಾಯಗೊಳ್ಳುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳು ಕಂಡು ಬರಲಿವೆ ಎಂದು ಹೇಳಿದ್ದಾರೆ.
ಬದಲಾವಣೆ ಡಿಸೆಂಬರ್, ಜನವರಿ ಅಥವಾ ಫೆಬ್ರವರಿಯಲ್ಲಿ ಆಗಬಹುದು. ಈಗ ತೊಂದರೆ ಇಲ್ಲ. ಈಗ ಸಿಎಂ ಡಿಸಿಎಂ ಪ್ರೆಸ್ ಮೀಟ್ ಮಾಡಿದ್ದಾರೆ ಅಂದರೆ, ತೊಂದರೆ ಇದೆ ಅಂತ ಅರ್ಥ. ಇದರ ಬಗ್ಗೆ ಕಾಂಗ್ರೆಸ್ ಹೈಕಮಾಡ್ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.
ಅಜಯ್ ರಾಜ್ಯದ ಮಾಜಿ ಸಿಎಂ ದಿವಂಗತ ಎನ್. ಧರಂ ಸಿಂಗ್ ಅವರ ಪುತ್ರ. ಬಹುನಿರೀಕ್ಷಿತ ಸಚಿವ ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನಕ್ಕಾಗಿ ಪ್ರಬಲ ಸ್ಪರ್ಧಿಯೂ ಆಗಿದ್ದಾರೆ.
ಏತನ್ಮಧ್ಯೆ, ಅಜಯ್ ಸಿಂಗ್ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಕಿಡಿಕಾರಿದ್ದು, "ಅವರು (ಅಜಯ್) ಮುಖ್ಯಮಂತ್ರಿಯೋ? ಅಥವಾ ಹೈಕಮಾಂಡ್?" ಎಂದು ಪ್ರಶ್ನಿಸಿದ್ದಾರೆ.