ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಇತ್ತೀಚೆಗೆ ಒಂದು ಜೋಕ್ಸ್ ಹರಿದಾಡುತ್ತಿದೆ, ಅದು ಸಿದ್ದರಾಮಯ್ಯ ಬೆಸ ದಿನಾಂಕಗಳಲ್ಲಿ ಆಡಳಿತ ನಡೆಸಬೇಕು ಮತ್ತು ಡಿಕೆ ಶಿವಕುಮಾರ್ ಸಮ ದಿನಾಂಕಗಳಲ್ಲಿ ಆಡಳಿತ ನಡೆಸಬೇಕು!
ಆದರೆ ಈ ಜೋಕ್ ಹಿಂದೆ ಇರುವ ವಾಸ್ತವ ಅಂಶ ಕಾಂಗ್ರೆಸ್‌ನೊಳಗೆ ಅಧಿಕಾರಕ್ಕಾಗಿ ಆಂತರಿಕ ಕಿತ್ತಾಟ. ಇದು ಕರ್ನಾಟಕದ ರಾಜಕೀಯ ಅಸ್ಥಿರತೆಯ ಪುನರಾವರ್ತನೆಯಾಗಿರಬಹುದು.
2008-13ರ ಬಿಜೆಪಿ ಸರ್ಕಾರದ ಆಡಳಿತದೊಂದಿಗೆ ಇಂದಿನ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಜನ ತುಲನೆ ಮಾಡಿ ನೋಡುತ್ತಿದ್ದಾರೆ.ಆ ಸಮಯದಲ್ಲಿ ಕೂಡ ಬಿಜೆಪಿಯೊಳಗೆ ಆಂತರಿಕ ಕಿತ್ತಾಟ, ರೆಸಾರ್ಟ್ ರಾಜಕೀಯ ಮತ್ತು ಬಣ ಘರ್ಷಣೆಗಳಿಂದ ಪೀಡಿತವಾಗಿತ್ತು, ಇದು ಅಂತಿಮವಾಗಿ 2013 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿತು. ಇದರಿಂದ ಎಲ್ಲಾ ಪಕ್ಷಗಳು ಕಲಿಯಬೇಕಾದ ಪಾಠವಿದೆ, ದೀರ್ಘಕಾಲದ ಆಂತರಿಕ ಜಗಳವು ಕರ್ನಾಟಕದ ಆಡಳಿತ ಪಕ್ಷಕ್ಕೆ ಒಳ್ಳೆಯದಲ್ಲ, ಏಕೆಂದರೆ ಮತದಾರರು ಅಸ್ಥಿರತೆಯನ್ನು ತಿರಸ್ಕರಿಸುತ್ತಾರೆ.
1980 ಮತ್ತು 1990 ರ ದಶಕಗಳಲ್ಲಿ ಜನತಾ ದಳದ ಭವಿಷ್ಯವನ್ನು ಹಿರಿಯ ರಾಜಕೀಯ ವಿಶ್ಲೇಷಕರು ನೆನಪಿಸಿಕೊಳ್ಳುತ್ತಾರೆ. ನಿರಂತರ ಅಧಿಕಾರ ಹೋರಾಟಗಳು ಪಕ್ಷವನ್ನು ಆಂತರಿಕವಾಗಿ ಖಾಲಿ ಮಾಡಿ, ವಿಭಜನೆಗಳಿಗೆ ಮತ್ತು ಅಂತಿಮವಾಗಿ ಅಪ್ರಸ್ತುತತೆಗೆ ಕಾರಣವಾಗುತ್ತದೆ. ಪರಿಣಾಮಕಾರಿಯಾಗಿ ಆಡಳಿತ ನಡೆಸುವ ಬದಲು ಪರಸ್ಪರರನ್ನು ಮೀರಿಸುವಲ್ಲಿ ಹೆಚ್ಚು ತೊಡಗಿಸಿಕೊಂಡ ನಾಯಕರಿಗೆ ಕರ್ನಾಟಕದ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ.
ಪಂಜಾಬ್ ಕಾಂಗ್ರೆಸ್ ಸ್ಥಿತಿ ಕರ್ನಾಟಕದಲ್ಲಿ
ಪಂಜಾಬ್ ರಾಜ್ಯದಲ್ಲಿ ಅಧಿಕಾರ ಹೊಂದಿದ್ದ ಕಾಂಗ್ರೆಸ್ ಆಂತರಿಕ ಜಗಳಗಳಿಂದ ಮುಂದಿನ ಚುನಾವಣೆಯಲ್ಲಿ ಸೋತಿತು. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪ್ರಕ್ಷುಬ್ಧತೆಗೆ ಕಾರಣರಾದವರನ್ನು ಬಹಿರಂಗವಾಗಿಯೇ ಹೇಳಿಕೊಂಡರು.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಯಾವುದೇ ನಾಯಕತ್ವದ ಬಿಕ್ಕಟ್ಟು ನಮ್ಮಲ್ಲಿ ಇಲ್ಲ ಎಂದು ಹೇಳುತ್ತಿದ್ದರೂ ಪರಸ್ಥಿತಿ ಬೇರೆಯದ್ದೇ ಸೂಚಿಸುತ್ತದೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ದೊಡ್ಡ ಬೆಂಬಲ ಇದೆ. ಅವರಿಗೆ ಹೋಲಿಸಿದರೆ ಡಿ ಕೆ ಶಿವಕುಮಾರ್ ಗೆ ಶಾಸಕರ ಬೆಂಬಲ ಕಡಿಮೆ. ಬಹುಶಃ ಕೆಲವು ಅಂದಾಜಿನ ಪ್ರಕಾರ 25 ಶಾಸಕರಿಗಿಂತ ಹೆಚ್ಚು ಬೆಂಬಲ ಅವರಿಗಿಲ್ಲ.
ಡಿ ಕೆ ಶಿವಕುಮಾರ್ ಬೆಂಬಲಿಗರಲ್ಲಿ ಹೆಚ್ಚು ಕೇಳಿಬರುತ್ತಿರುವ ಹೆಸರುಗಳು ಇಕ್ಬಾಲ್ ಹುಸೇನ್, ಬಸವರಾಜ್, ನಯನಾ ಮೋಟಮ್ಮ, ಬಾಲಕೃಷ್ಣ ಮತ್ತು ರಂಗನಾಥ್. ಶಾಸಕ ಬಲ ಹೊಂದಿರುವ ಸಿದ್ದರಾಮಯ್ಯ ಅವರನ್ನು ಎದುರಿಸಲು ಅಗತ್ಯವಿರುವ ಶಾಸಕರು ಕೂಡ ಅಷ್ಟಿಲ್ಲ.
ನಾಯಕತ್ವ ಬಿಕ್ಕಟ್ಟಿನ ಮೂಲದಲ್ಲಿ ಆಳವಾದ ರಚನಾತ್ಮಕ ಸಮಸ್ಯೆ ಇದೆ. ಸಿದ್ದರಾಮಯ್ಯ ಅವರನ್ನು ವಿಶಾಲ ಸಾಮಾಜಿಕ ಒಕ್ಕೂಟವನ್ನು ಹೊಂದಿರುವ ಸಾಮೂಹಿಕ ನಾಯಕ ಎಂದು ವ್ಯಾಪಕವಾಗಿ ನೋಡಲಾಗುತ್ತದೆ, ಆದರೆ ಡಿ ಕೆ ಶಿವಕುಮಾರ್ ಅವರ ಸಾಂಸ್ಥಿಕ ಸಾಮರ್ಥ್ಯ ಮತ್ತು ರಾಜಕೀಯ ಕುಶಾಗ್ರಮತಿಯ ಹೊರತಾಗಿಯೂ, ಜಾತಿ ಆಧಾರಿತ ನಾಯಕನಾಗಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಇನ್ನೂ ಪ್ರಯತ್ನಿಸುತ್ತಿದ್ದಾರೆ. ಪ್ರಭಾವ ಮತ್ತು ಸಾರ್ವಜನಿಕ ಆಕರ್ಷಣೆಯ ಅಸಮತೆ ಸ್ಪಷ್ಟವಾಗಿದ್ದು, ನಾಯಕತ್ವ ಬದಲಾವಣೆ ಒತ್ತಡ ಸಂಕೀರ್ಣವಾಗಿದೆ.
ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಆಳವಾದ ಜಾತಿ/ವರ್ಗ ಸಮರ ನಡೆಯುತ್ತಿದೆ. ಈಗಿನ ಅವರ ಒಗ್ಗಟ್ಟು ಪ್ರದರ್ಶನ ಅಲ್ಪಕಾಲವಷ್ಟೆ. ದುರ್ಬಲಗೊಂಡ ಹೈಕಮಾಂಡ್ ಇಬ್ಬರು ಪ್ರಬಲ ನಾಯಕರನ್ನು ಒಟ್ಟಿಗೆ ತರಲು ಅಸಮರ್ಥವಾಗಿದೆ ಎನಿಸುತ್ತದೆ. ಈ ಬದಲಾವಣೆಯನ್ನು ತಡೆಯಲು ಕಾಂಗ್ರೆಸ್ ವಿಫಲವಾದರೆ, ಅದು ತನ್ನದೇ ಆದ ಸರ್ಕಾರ ಮತ್ತು ಚುನಾವಣಾ ನಿರೀಕ್ಷೆಗಳನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ಕಾಂಗ್ರೆಸ್ ಗೆ ನಿರ್ಣಾಯಕ ಪರೀಕ್ಷೆಯಾಗಲಿದೆ.