ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಹಗ್ಗಜಗ್ಗಾಟದ ನಡುವೆಯೇ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಖಾಸಗಿ ಮದುವೆ ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾಗಿದ್ದು, ಮಾತುಕತೆ ನಡೆಸಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.
ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ ಅವರೊಂದಿಗೆ ಭಿನ್ನಮತ ಹೊಂದಿರುವುದು ರಾಜಕೀಯ ವಲಯದಲ್ಲಿ ತಿಳಿದಿರುವ ಸಂಗತಿ. ಗುರುವಾರ ರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ಅವರು ಭೇಟಿಯಾದರು. ಇತ್ತೀಚಿನ ದಿನಗಳಲ್ಲಿ ಇಬ್ಬರು ನಾಯಕರ ನಡುವಿನ ಎರಡನೇ ಭೇಟಿ ಇದಾಗಿದೆ. ನವೆಂಬರ್ 25 ರಂದು ಮೊದಲ ಬಾರಿಗೆ ಭೇಟಿಯಾಗಿದ್ದರು.
ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆಯಲ್ಲಿರುವ ಡಿಕೆ ಶಿವಕುಮಾರ್, ಜಾರಕಿಹೊಳಿ ಅವರ ಬೆಂಬಲ ಕೋರಿದ್ದಾರೆ ಎಂಬ ವರದಿಗಳು ಕೇಳಿಬಂದಿದ್ದವು. ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆಯೂ ವರದಿಯಾಗಿತ್ತು. ಇಂತಹ ವರದಿಗಳನ್ನು ಶಿವಕುಮಾರ್ ಮತ್ತು ಜಾರಕಿಹೊಳಿ ಇಬ್ಬರೂ ಶುಕ್ರವಾರ ತಳ್ಳಿಹಾಕಿದರು. ವಿವಾಹ ಸಮಾರಂಭದಲ್ಲಿ ನಡೆದ ಸಾಂದರ್ಭಿಕ ಭೇಟಿಯಾಗಿತ್ತು. ಸತೀಶ್ ಜಾರಕಿಹೊಳಿ ಮತ್ತು ನಾನು ಸಹೋದ್ಯೋಗಿಗಳು ಎಂದು ಡಿಕೆ ಶಿವ ಕುಮಾರ್ ಹೇಳಿದರು.
ಮಧ್ಯಾಹ್ನ ಸಚಿವ ಸಂಪುಟ ಸಭೆಯಲ್ಲಿ ನಾವು ಭೇಟಿಯಾಗಿದ್ದೇವು. ರಾತ್ರಿ ಊಟಕ್ಕೆ ಭೇಟಿಯಾಗಬಹುದು, ಬೆಳಿಗ್ಗೆ ಉಪಾಹಾರಕ್ಕೆ ಭೇಟಿಯಾಗಬಹುದು. ಆ ಎಲ್ಲಾ ವಿಷಯಗಳು ಅಲ್ಲಿಯೇ ಇರುತ್ತವೆ. ಈಗ ಸಚಿವ ಎಂ ಬಿ ಪಾಟೀಲ್ ಮತ್ತು ನಾನು ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸುವ ಬಗ್ಗೆ ಮತ್ತು ನೆರೆಯ ರಾಜ್ಯಗಳಿಂದ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯ ಬಗ್ಗೆ ಒಂದು ಗಂಟೆ ಚರ್ಚಿಸಿದ್ದೇವೆ. ರಾಜ್ಯದ ಹಿತಾಸಕ್ತಿಗಾಗಿ ನಾವು ಚರ್ಚಿಸುತ್ತೇವೆ ಎಂದು ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾನು ಮತ್ತು ಸತೀಶ್ ಶುಕ್ರವಾರ ರಾತ್ರಿ ಮದುವೆ ಸಮಾರಂಭದಲ್ಲಿ ಭೇಟಿಯಾಗಿದ್ದು ನಿಜ. ಪಕ್ಷ ಮತ್ತು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿದ್ದೇವೆ. ನಾವೆಲ್ಲರೂ ಸಹೋದ್ಯೋಗಿಗಳು. ನೀವು (ಮಾಧ್ಯಮದವರು) ನಮ್ಮನ್ನು ಶತ್ರುಗಳೆಂದು ಪರಿಗಣಿಸುತ್ತಿರುವಂತೆ ತೋರುತ್ತಿದೆ ಎಂದರು. ಅವರ ಭೇಟಿಯ ಬಗ್ಗೆ ಸಾಕಷ್ಟು ಕುತೂಹಲವಿದೆ ಎಂದು ಪತ್ರಕರ್ತರು ಹೇಳಿದಾಗ, ಯಾವುದೇ ರಾಜಕೀಯ ಇಲ್ಲ. ಸ್ನೇಹ ಮತ್ತು ಭಾಂದ್ಯವ್ಯದ ಭೇಟಿಯಾಗಿತ್ತು ಎಂದು ಹೇಳಿದರು.
ಜಾರಕಿಹೊಳಿ ಕೂಡಾ ಡಿಕೆ ಶಿವಕುಮಾರ್ ಜೊತೆಗೆ ಒಟ್ಟಿಗೆ ಭೋಜನ ಮಾಡಿದ್ದೇವೆ ಎಂದು ದೃಢಪಡಿಸಿದರು. 15 ನಿಮಿಷ ಪ್ರತ್ಯೇಕ ಮಾತುಕತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, "15 ನಿಮಿಷ ಏಕೆ? ನಾವು ಪ್ರತ್ಯೇಕವಾಗಿ ದೀರ್ಘ ಸಮಯದವರೆಗೆ ಚರ್ಚೆ ಮಾಡಿರಬಹುದು. ಇದು ಮದುವೆ ಕಾರ್ಯಕ್ರಮವಾಗಿತ್ತು. ಡಿಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರು. ಸಾಮಾನ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತ ಪ್ರಶ್ನೆಗೆ "ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ ಮತ್ತು ಅಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ. ಆ ಪರಿಸ್ಥಿತಿ ಬಂದಾಗ ನೋಡೋಣ. ಪಕ್ಷದ ಮಟ್ಟದಲ್ಲಿ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು. ಬಿಜೆಪಿಯವರು ಸುಮ್ಮನೆ ಮಾಡಬೇಕೆಂದು ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ನಂಬರ್ ಇದೆ, ಅವಿಶ್ವಾಸಕ್ಕೆ ಸೋಲಾಗುತ್ತದೆ. ಡಿಸೆಂಬರ್ ಹದಿನೆಂಟರ ನಂತರ ಮತ್ತೆ ಕುರ್ಚಿ ಫೈಟ್ ಆರಂಭವಾಗುತ್ತೆ ಎನ್ನುವ ಮಾತಿಗೆ ನನ್ನ ಬೆಂಬಲವಿಲ್ಲ. ಎಲ್ಲವೂ ಈಗ ಸುಸೂತ್ರವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಮಧ್ಯೆ ಶಿವಕುಮಾರ್ ಶುಕ್ರವಾರ ಸಚಿವರಾದ ಎಂ ಬಿ ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಉಪಮುಖ್ಯಮಂತ್ರಿ ತಮ್ಮ ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಹಿರಿಯ ನಾಯಕರು ಮತ್ತು ಸಚಿವರನ್ನು ಸಂಪರ್ಕಿಸುತ್ತಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಈ ಸಭೆ ನಡೆದಿದೆ. ಆದರೆ, ಹೂಡಿಕೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಸಭೆ ನಡೆದಿದೆ ಎಂದು ಎಂಬಿ ಪಾಟೀಲ್ ತಿಳಿಸಿದ್ದಾರೆ.