ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಜರಂಗದಳ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಇದರ ಬೆನ್ನಲ್ಲೇ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆಯವರು, ಹೆಣ ಬಿದ್ದರೆ ರಣ ಹದ್ದುಗಳಂತೆ ಹಾರಿ ಬರುವ ಬಿಜೆಪಿ ನಾಯಕರು ಸಮಾಜದ ಸಾಮರಸ್ಯ ಕದಡುವ ಈ ಕುಕೃತ್ಯದ ಬಗ್ಗೆ ನೀಡುವ ಉತ್ತರವೇನು? ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಸದಸ್ಯರೊಂದಿಗೆ ನಾನೂ ಸಮಾನ ದುಃಖಿತನಾಗಿದ್ದೇನೆಂದು ಹೇಳಿದ್ದಾರೆ.
ಸಂಘ ಪಾರಿವಾರದ ಭಯೋತ್ಪಾದಕ ಮುಖಗಳು ಬಯಲಾಗುತ್ತಿವೆ. ನಮ್ಮ ಸರ್ಕಾರವು ಕೊಲೆಗಡುಕರಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ ಗಣೇಶ್ ಅವರ ಸಾವಿಗೆ ನ್ಯಾಯ ದೊರಕಿಸಿಕೊಡಲಿದೆ. ಶಾಖೆಯಲ್ಲಿ ಇಂತಹ ಪಾತಕ ಪಾಠಗಳನ್ನು ಹೇಳಿಕೊಡುವುದೇ ಸಂಘ ಪರಿವಾರದ ಸಂಸ್ಕಾರವೇ?
ಸಂಗ್ರಹವಾಗುವ ಗುರುದಕ್ಷಿಣೆಯು ಇಂತಹ ಕುಕೃತ್ಯಗಳಿಗೆ ಬಳಕೆಯಾಗುತ್ತಿದೆಯೇ? ಹೆಣ ಬಿದ್ದರೆ ರಣ ಹದ್ದುಗಳಂತೆ ಹಾರಿ ಬರುವ ಬಿಜೆಪಿ ನಾಯಕರು ಸಮಾಜದ ಸಾಮರಸ್ಯ ಕದಡುವ ಈ ಕುಕೃತ್ಯದ ಬಗ್ಗೆ ನೀಡುವ ಉತ್ತರವೇನು? ಎಂದು ಪ್ರಶ್ನಿಸಿದ್ದಾರೆ.