ಬೆಳಗಾವಿ: ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿತ್ತು. ಆದರೆ ನಾನು ಪಕ್ಷದಲ್ಲಿದ್ದರೆ ಅದು ಸಾಧ್ಯವಿಲ್ಲ ಎಂದು ನನ್ನನ್ನು ಉಚ್ಛಾಟಿಸಲಾಯಿತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಡಿಸಿಎಂ ಆಗಲೇಂದು ದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ಸಹ ನಡೆಸಿದ್ದರು. ಆದರೆ ಈ ಪ್ರಯತ್ನವನ್ನು ಹೈಕಮಾಂಡ್ ತಿರಸ್ಕರಿಸಿತು ಎಂದು ಯತ್ನಾಳ್ ಹೇಳಿದ್ದಾರೆ. ಇಂದು ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಡಿಸಿಎಂ ಆಗುವ ಕನಸು ಕಂಡಿದ್ದ ವಿಜಯೇಂದ್ರ, ಡಿಕೆ ಶಿವಕುಮಾರ್ ಅವರನ್ನು ಕೇಂದ್ರ ಸಚಿವ ಅಮಿತ್ ಶಾ ಬಳಿ ಕರೆದುಕೊಂಡು ಹೋಗಿದ್ದರು. ಆದರೆ ಅದನ್ನು ಹೈಕಮಾಂಡ್ ತಿರಸ್ಕರಿಸಿತ್ತು. ಈ ಮಾತನ್ನು ಬಿಜೆಪಿಯವರೇ ನನಗೆ ಹೇಳಿದ್ದರು. ಆ ನಂತರ ಅಮಿತ್ ಶಾರ ಸೂಚನೆ ಮೇರೆಗೆ ಜೋಶಿಯವರು ನಾವು ಯಾರನ್ನೂ ಸೇರಿಸಿಕೊಳ್ಳುತ್ತಿಲ್ಲ ಅಂತ ಹೇಳಿಕೆ ಕೊಟ್ಟರು ಎಂದು ಯತ್ನಾಳ್ ಹೇಳಿದರು.