ಬೆಂಗಳೂರು: ಡಿಸೆಂಬರ್ 26 ಅಥವಾ 27ರಂದು ದೆಹಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭೇಟಿ ನೀಡುತ್ತಿದ್ದು, ಇದರ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಮತ್ತೆ ಜೋರಾಗಿದೆ.
ಡಿಸೆಂಬರ್ 27 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಿಗದಿಯಾಗಿದೆ. ಆದರೆ, ನಾಯಕತ್ವ ವಿಚಾರ ಕಾರ್ಯಸೂಚಿಯಲ್ಲಿಲ್ಲ. ಸಭೆಯಲ್ಲಿ ಭಾಗವಹಿಸಲು ಯಾವುದೇ ನಾಯಕರಿಗೂ ಇನ್ನು ಅಧಿಕೃತ ಆಹ್ವಾನ ಬಂದಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ಸ್ಪಷ್ಟಪಡಿಸಿದ್ದಾರೆ.
ಸಭೆಗೂ ಮುನ್ನ ಅಥವಾ ಸಭೆಯ ನಂತರ ಹೈಕಮಾಂಡ್ ಜೊತೆಗೆ ನಾಯಕತ್ವ ವಿಚಾರ ಕುರಿತು ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಚರ್ಚಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಭೆಗೆ ಹಾಜರಾಗಲು ಸಿಎಂ ಅಥವಾ ಡಿಸಿಎಂಗೆ ಯಾವುದೇ ಅಧಿಕೃತ ಸೂಚನೆಗಳು ಬಂದಿಲ್ಲ. ದೆಹಲಿಗೆ ಬರುವಂತೆ ನಾಯಕರೂ ಸೂಚನೆಯನ್ನೂ ನೀಡಿಲ್ಲ ಎಂದು ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಹೇಳಿದ್ದಾರೆ,
ರಾಜ್ಯದಲ್ಲಿ 2023ರ ಮೇ ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅಧಿಕಾರ ಹಂಚಿಕೆ ಒಪ್ಪಂದವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ನಡುವೆ ಸರ್ಕಾರ ಎರಡೂವರೆ ವರ್ಷ ಅಧಿಕಾರ ಪೂರೈಸಿದ ಬಳಿಕ ನಾಯಕತ್ವ ಬದಲಾವಣೆ ವಿಚಾರ ತೀವ್ರಗೊಂಡಿದೆ. ಏತನ್ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಹಂಚಿಕೆ ವಿಚಾರವನ್ನು ನಿರಾಕರಿಸುತ್ತಲೇ ಬಂದಿದ್ದಾರೆ.
ಡಿಸೆಂಬರ್ 19ರಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಅವರು, ಎರಡೂವರೆ ವರ್ಷ' ಬಗ್ಗೆ ನಾನು ಎಂದಿಗೂ ಏನನ್ನೂ ಹೇಳಿಲ್ಲ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ. ಪಕ್ಷದ ಹೈಕಮಾಂಡ್ ನಿರ್ಧರಿಸದ ಹೊರತು ಮುಖ್ಯಮಂತ್ರಿಯಾಗಿಯೇ ಮುಂದುವರಿಯುತ್ತೇನೆ. ನಾನೀಗ ಮುಖ್ಯಮಂತ್ರಿಯಾಗಿದ್ದೇನೆ. ಹೈಕಮಾಂಡ್ ಹೇಳುವವರೆಗೂ ಮುಖ್ಯಮಂತ್ರಿಯಾಗಿಯೇ ಇರುತ್ತೇನೆ. ನಮ್ಮ ಸರ್ಕಾರ ಅಧಿಕಾರವನ್ನು ಪೂರ್ಣಗೊಳಿಸುತ್ತದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಹೇಳಿಕೆ ನೀಡಿರುವ ಡಿಕೆ.ಶಿವಕುಮಾರ್ ಅವರು, ಹೈಕಮಾಂಡ್ "ಸೂಕ್ತ ಸಮಯದಲ್ಲಿ" ನಿರ್ಧಾರ ತೆಗೆದುಕೊಳ್ಳುತ್ತದೆ ಆ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆಂದು ಹೇಳಿದ್ದಾರೆ.