ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಲು ನಿಜವಾದ ಕಾರಣ ಏನು ಎಂಬುದನ್ನು ಆಳಂದ ಶಾಸಕ ಬಿ.ಆರ್. ಪಾಟೀಲ್ ಭಾನುವಾರ ಬಹಿರಂಗಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಇತರ ಶಾಸಕರಂತೆ ನನಗೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಸುಖಾಸುಮ್ಮನೆ ರಾಜೀನಾಮೆ ಕೊಟ್ಟಿಲ್ಲ. ಕೆಲವು ಸಮಸ್ಯೆಗಳು ಇರುವ ಕಾರಣದಿಂದ ನಾನು ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಬಿಆರ್ ಪಾಟೀಲ್ ಡಿಸೆಂಬರ್ 29, 2023 ರಿಂದ ಸಿಎಂ ರಾಜಕೀಯ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಶನಿವಾರ ತನ್ನ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸಿದ್ದರು. ಆದರೆ, ತಮ್ಮ ದಿಢೀರ್ ತೀರ್ಮಾನಕ್ಕೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿರಲಿಲ್ಲ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಆರ್. ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಸ್ಥಾನಕ್ಕೆ ನಾನು ರಾಜೀನಾಮೆ ಕೊಟ್ಟಿರುವುದು ವಿಶೇಷವೇನಲ್ಲ. ಅನೇಕ ಸಮಸ್ಯೆಗಳಿವೆ. ನಾನು ಮೊದಲೇ ರಾಜೀನಾಮೆ ಕೊಡಬೇಕಿತ್ತು. ಆದರೆ ಈಗ ರಾಜೀನಾಮೆ ನೀಡುವ ಸಂದರ್ಭ ಬಂದಿತು. ಒಂದು ವೇಳೆ ಸಿಎಂ ನನನ್ನು ಕರೆದರೆ, ಅವರನ್ನು ಭೇಟಿಯಾಗಿ ಎಲ್ಲವನ್ನೂ ವಿವರಿಸುವುದಾಗಿ ಹೇಳಿದರು.
ಈ ಹಿಂದೆ ಎರಡು ಬಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಮುಡಾ ಕೇಸ್ ಹಾಗೂ ರಾಜ್ಯ ಬಜೆಟ್ ಸಿದ್ಧತೆ ಕಾರಣದಿಂದ ಅವರು ಸದ್ಯ ಬಹಳ ಒತ್ತಡದಲ್ಲಿದ್ದಾರೆ. ಕೊನೆವರೆಗೂ ನನ್ನೊಂದಿಗೆ ಇರುವುದಾಗಿ ಹೇಳಿದ್ದಾರೆ ಎಂದು ಪಾಟೀಲ್ ತಿಳಿಸಿದರು.