ಬಾಗಲಕೋಟೆ: ಜನ ಅಪ್ಪನನ್ನು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ ಮಗನನ್ನೂ ಇಷ್ಟಪಡುತ್ತಾರೆ ಅಂತ ಹೇಳಲಾಗದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಡನೆ ಮಾತಾಡಿದ ನಿರಾಣಿ, ಪರೋಕ್ಷವಾಗಿ ವಿಜಯೇಂದ್ರ ಕೆಲಸ ಮಾಡುತ್ತಿರುವ ವಿಧಾನವನ್ನು ಟೀಕಿಸಿದರು. ಜನ ಅಪ್ಪನನ್ನು ಇಷ್ಟಪಡುತ್ತಾರೆಂಬ ಕಾರಣಕ್ಕೆ ಮಗನನ್ನೂ ಇಷ್ಟಪಡುತ್ತಾರೆ ಅಂತ ಹೇಳಲಾಗದು ಎಂದರು.
ಬೀಳಗಿ ಜನ ತನ್ನನ್ನು ಒಪ್ಪಿಕೊಂಡಿದ್ದಾರೆ ಮತ್ತು ತಿರಸ್ಕರಿಸಿದ್ದಾರೆ. ನನ್ನಂತೆ ನನ್ನ ಮಗನನ್ನು ಅವರು ಇಷ್ಟಪಟ್ಟಾರು ಅಂತ ಹೇಳಲಾಗಲ್ಲ. ಪಕ್ಷದ ನಾಯಕರ ಆಂತರಿಕ ವೈಮನಸ್ಸುಗಳು ಬೀದಿಗೆ ಬರಬಾರದು, ವಿಜಯೇಂದ್ರ ಅವರು ಪ್ರತಿಯೊಬ್ಬ ನಾಯಕರೊಂದಿಗೆ ಮುಖಾಮುಖಿಯಾಗಿ ಮಾತಾಡಬೇಕು ಎಂದು ಸಲಹೆ ನೀಡಿದರು.
ಬಿ.ಎಸ್. ಯಡಿಯೂರಪ್ಪ ಅವರ ಬಳಿ ಸಹಾಯ ಪಡೆದುಕೊಂಡವರು, ವಿರೋಧಿ ಬಣದ ಆರೋಪಗಳ ಬಗ್ಗೆ ಹಿರಿಯ ನಾಯಕರು ಏನೂ ಮಾತಾಡ್ತಿಲ್ಲ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಾಣಿ, ತಂದೆಯವರ ಕಡೆ ಸಹಾಯ ತಗೊಂಡಾರ ಅಂದ್ರೆ, ಅವರು ಬೇರೆ ಮಾತನಾಡುತ್ತಾರೆ. ಆ ಮಾತು ವಾದ-ವಿವಾದಕ್ಕೆ ಕಾರಣವಾಗುತ್ತೆ. ನಾಲ್ಕು ಗೋಡೆಯ ಮಧ್ಯೆ ಅಸಮಾಧಾನವನ್ನು ಸರಿಪಡಿಸಿಕೊಳ್ಳಬೇಕು. ವಿಜಯೇಂದ್ರ ಎಲ್ಲರನ್ನೂ ಕರೆದು ಮಾತನಾಡಬೇಕು ಎಂದರು.