ಹುಬ್ಬಳ್ಳಿ: ಭಾರತದಲ್ಲಿ ಬೇರೆ ಸರ್ಕಾರ ತರಲು ಈ ಹಿಂದೆ 21 ಮಿಲಿಯನ್ ಯುಎಸ್ ಡಾಲರ್ ದೇಣಿಗೆ ಹೋಗುತ್ತಿತ್ತು ಎಂದಿರುವ ಅಮೇರಿಕಾ ಅಧ್ಯಕ್ಷರ ಹೇಳಿಕೆಗೆ ಕಾಂಗ್ರೆಸ್ ಪಕ್ಷ ಉತ್ತರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಭಾರತದಲ್ಲಿ ಬೇರೆಯವರನ್ನು ಆರಿಸಲು ಪ್ರಯತ್ನ ನಡೆದಿತ್ತು ಎಂಬ ಸತ್ಯವನ್ನು ಈಗ ಅಮೇರಿಕಾ ಅಧ್ಯಕ್ಷರೇ ಹೊರಗೆಡವಿದ್ದಾರೆ. ಮಾಧ್ಯಮಗಳಲ್ಲಿ ಅದು ವರದಿಯಾಗಿದೆ ಎಂದರು.
ಅಮೆರಿಕದಲ್ಲಿ ಹಿಂದೆ ಅಧಿಕಾರದಲ್ಲಿ ಇದ್ದವರು ಇದಕ್ಕಾಗಿ ಯುಎಸ್ ಮೂಲದ ಸಂಸ್ಥೆಯೊಂದರ ಮೂಲಕ ಭಾರತಕ್ಕೆ 21 ಮಿಲಿಯನ್ ಡಾಲರ್ ದೇಣಿಗೆ ನೀಡಿದೆ ಎಂಬ ಸುದ್ದಿ ಹರಡಿದೆ. ಇದಕ್ಕೆ ಈಗ ಕಾಂಗ್ರೆಸ್ ಪಕ್ಷ ಉತ್ತರಿಸಲೇಬೇಕು ಎಂದು ಜೋಶಿ ಆಗ್ರಹಿಸಿದರು.
ಕಾಂಗ್ರೆಸ್ ಸತ್ಯ ಬಾಯಿ ಬಿಡಲಿ: ಇಷ್ಟೊಂದು ಪ್ರಮಾಣದ ಯುಎಸ್ ಡಾಲರ್ ಭಾರತದಲ್ಲಿ ಯಾರಿಗೆ ದೇಣಿಗ್ಗೆ ರೂಪದಲ್ಲಿ ಬರುತ್ತಿತ್ತು? ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಬಾಹ್ಯ ಶಕ್ತಿ ಹಸ್ತಕ್ಷೇಪ ಮಾಡುತ್ತಿತ್ತು ಎಂಬುದನ್ನು ಕಾಂಗ್ರೆಸ್ ಪಕ್ಷ ಬಾಯಿ ಬಿಡಬೇಕು. ಜಾರ್ಜ್ ಸೊರಾಸ್ ಜತೆ ಕಾಂಗ್ರೆಸ್ ಪಕ್ಷಕ್ಕೆ ನೇರ ನಂಟಿತ್ತು ಎಂದು ಆ ಪಕ್ಷದಲ್ಲೇ ಇರುವ ಸ್ಯಾಮ್ ಪಿತ್ರೋಡಾ ಹೇಳಿಕೆ ನೀಡಿದ್ದಾರೆ. ಹಾಗಾಗಿ ಕಾಂಗ್ರೆಸ್ಸಿಗರೇ ಇದರ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಜೋಶಿ ಒತ್ತಾಯಿಸಿದರು.
ಸ್ಯಾಮ್ ಪಿತ್ರೋಡಾ "ಚೀನಾ ನಮ್ಮ ಶತ್ರು ದೇಶವಲ್ಲ" ಎಂದಿದ್ದಾರೆ .ಚೀನಾ ಶತ್ರು ರಾಷ್ಟ್ರ ಹೌದೋ ಅಲ್ಲವೋ ಎಂಬ ಚರ್ಚೆ ಆಮೇಲಿನ ವಿಷಯ. ಆದರೆ, ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ಪಕ್ಷದ ವಿದೇಶಿ ವ್ಯಾವಹಾರಿಕ ಸೆಲ್ ನ ಅಧ್ಯಕ್ಷ ಎನ್ನುತ್ತಿದ್ದಾರೆ. ಇತ್ತ ಕಾಂಗ್ರೆಸ್ ಅವರು ನಮ್ಮ ಪಕ್ಷದಲ್ಲೇ ಇಲ್ಲಾ ಎನ್ನುತ್ತಿದ್ದಾರೆ. ಇದಕ್ಕೆ ಮೊದಲು ಸ್ಪಷ್ಟ ಉತ್ತರ ಸಿಗಬೇಕು. ಕಾಂಗ್ರೆಸ್ ಪಾರ್ಟಿ ಮೊದಲು ಸ್ಯಾಮ್ ಪಿತ್ರೋಡಾರನ್ನು ಕಿತ್ತು ಹಾಕುತ್ತಾ? ನೋಡಬೇಕು ಎಂದು ಪ್ರತಿಕ್ರಿಯಿಸಿದರು.
ಚುನಾವಣೆ ವ್ಯವಸ್ಥೆ ಬುಡಮೇಲು ಮಾಡಲು ಕಾಂಗ್ರೆಸ್ ಯತ್ನ: ಕಾಂಗ್ರೆಸ್ ಪಕ್ಷ ಯಾವುದೋ ಬಾಹ್ಯ ಶಕ್ತಿಯ ಬೆಂಬಲ ಪಡೆದು ಭಾರತದ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ನೋಡಿದೆ. ಇದಕ್ಕಾಗಿ ಮೊದಲು ದೇಶದ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.