ಬೆಂಗಳೂರು: ನೀವು ಮುಖ್ಯಮಂತ್ರಿಯಾಗಿ ಏನು ಕಡಿದು ಕಟ್ಟೆ ಹಾಕಿದ್ದೀರಿ? ಎಂದು ಕೇಳಿದರೆ ನೀವು ಉತ್ತರ ಕೊಡಲು ತಡಕಾಡುವಿರಿ. ಮುಖ್ಯಮಂತ್ರಿಯಾಗಿದ್ದಾಗ ನೀವು ಈ ರಾಜ್ಯಕ್ಕೆ ಕೊಟ್ಟ ಕೊಡುಗೆಯೇನು.? ಉತ್ತರಿಸುವಿರಾ.? ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರಿಗೆ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶ್ನಿಸಿದ್ದಾರೆ.
ರಾಜ್ಯದ ಆರ್ಥಿಕ ಸ್ಥಿತಿ ಕುರಿತು ವಾಗ್ದಾಳಿ ನಡೆಸಿದ್ದ ಬೊಮ್ಮಾಯಿ ವಿರುದ್ಧ ದಿನೇಶ್ ಗುಂಡೂರಾವ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬೊಮ್ಮಾಯಿಯವರು ಈಗ ಸರ್ವಸಂಪನ್ನರಂತೆ ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ ಜನರ ಬಾಯಿಗೆ ಮಣ್ಣು ಹಾಕುತ್ತಿದೆ ಎನ್ನುವ ಬೊಮ್ಮಾಯಿಯವರಿಗೆ ಕನಿಷ್ಠ ಪಕ್ಷ ಆತ್ಮಸಾಕ್ಷಿ ಇದ್ದಿದರೆ ಈ ರೀತಿಯ ಮಾತು ಆಡುತ್ತಿರಲಿಲ್ಲ. ನೀವು ಮುಖ್ಯಮಂತ್ರಿಯಾಗಿ ಏನು ಕಡಿದು ಕಟ್ಟೆ ಹಾಕಿದ್ದೀರಿ? ಎಂದು ಕೇಳಿದರೆ ನೀವು ಉತ್ತರ ಕೊಡಲು ತಡಕಾಡುವಿರಿ. ಮುಖ್ಯಮಂತ್ರಿಯಾಗಿದ್ದಾಗ ನೀವು ಈ ರಾಜ್ಯಕ್ಕೆ ಕೊಟ್ಟ ಕೊಡುಗೆಯೇನು.? ಉತ್ತರಿಸುವಿರಾ.? ಎಂದು ಪ್ರಶ್ನಿಸಿದ್ದಾರೆ.
ಬೊಮ್ಮಾಯಿಯವರೆ, 2023ರಲ್ಲಿ ನೀವು ಮರಳಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯ ಗೊತ್ತಿತ್ತು. ಹಾಗಾಗಿ ಅಧಿಕಾರ ಬಿಡುವ ಮುನ್ನ ಬಜೆಟ್ ವೆಚ್ಚಕ್ಕಿಂತ 7 ಪಟ್ಟು ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿದಿರಿ. ಆ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಹಣ ಪಾವತಿ ಯಾರು ಮಾಡಬೇಕು.? ನಿಮ್ಮ ಸ್ವಂತ ಖಜಾನೆಯಿಂದ ಕೊಡುವಂತೆ ಅಪ್ರಸ್ತುತ ಕಾಮಗಾರಿಗಳಿಗೆ ಅನುಮೋದನೆ ಕೊಟ್ಟಾಗ ಪ್ರಜ್ಞೆ ಇರಲಿಲ್ಲವೆ.? ಇದು ಜನರ ಬಾಯಿಗೆ ಮಣ್ಣು ಹಾಕುವ ಕೆಲಸವಲ್ಲವೆ.?
ಬೊಮ್ಮಾಯಿಯವರೆ, ನೀವು ಮುಖ್ಯಮಂತ್ರಿಯಾಗಿದ್ದಾಗ ಎಂದಾದರೂ ಕೇಂದ್ರ ಸರ್ಕಾರದ ತೆರಿಗೆ ಅನ್ಯಾಯದ ಬಗ್ಗೆ ಎದೆಯೆತ್ತಿ ಮಾತಾಡಿದ್ದೀರಾ.? ಹೋಗಲಿ ಮೋದಿ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಒಮ್ಮೆಯಾದರೂ ಬಾಯಿ ಬಿಟ್ಟಿದ್ದೀರಾ.? ಮೋದಿಯವರ ಮುಂದೆ ನಡು ಬಗ್ಗಿಸಿ ನಿಂತಿದ್ದೆ ನಿಮ್ಮ ಸಾಧನೆಯಲ್ಲವೆ.? ಇದು ಜನರ ಬಾಯಿಗೆ ಮಣ್ಣು ಹಾಕುವ ಕೆಲಸವಲ್ಲವೆ.?
ಬೊಮ್ಮಾಯಿಯವರೆ, ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸರ್ಕಾರ 58 ಸಾವಿರ ಕೋಟಿ ಮೀಸಲಿರಿಸಿದೆ. ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಎಷ್ಟೋ ಮನೆಗಳ ದೀಪ ಉರಿಯುತ್ತಿದೆ ಎಂಬ ಅರಿವು ನಿಮಗರಲಿ. ನಿಮ್ಮ ನೇತೃತ್ವದ ಸರ್ಕಾರವಿದ್ದಾಗ ಯಾವುದಾದರೂ ಒಂದೇ ಒಂದು ಜನಪರ ಕಾರ್ಯಕ್ರಮ ಮಾಡಿದ ಉದಾಹರಣೆ ಇದೆಯೆ.? ರಾಜ್ಯದ ಖಜಾನೆ ಲೂಟಿ ಹೊಡದಿದ್ದೆ ನಿಮ್ಮ ಸರ್ಕಾರದ ಹೆಗ್ಗಳಿಕೆಯಲ್ಲವೆ.? ಎಂದು ಕೇಳಿದ್ದಾರೆ.