ಕಲಬುರಗಿ: ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಬಿ.ವೈ. ವಿಜಯೇಂದ್ರ ಜೊತೆಗೆ ಒಳ ಒಪ್ಪಂದವಿದೆ ಎಂಬ ಆರೋಪವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ನಿರಾಕರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವಿಜಯೇಂದ್ರ ಅವರ ಪ್ರಬಲ ವಿರೋಧಿ, ಅವರನ್ನು ಹಲವು ಬಾರಿ ವಿರೋಧಿಸಿದ್ದೇನೆ. ಅವರು ಯಾವಾಗಲೂ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಟೀಕಿಸುತ್ತಾರೆ. ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ. ಸ್ವತ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಿವಾಳಿಯಾಗಿದ್ದಾರೆಂದು ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಅವರು ಮೊದಲು ತಮ್ಮ ಪಕ್ಷದ ದಿವಾಳಿತನ ಬಗ್ಗೆ ಮಾತನಾಡಲಿ. ಪಾಪರ್ ಸರ್ಕಾರ ಎಂದು ಸುಮ್ಮನೇ ಟೀಕಿಸುವುದಲ್ಲ. ಮುಂದಿನ ಶನಿವಾರ ಕಲ್ಯಾಣ ಕರ್ನಾಟಕದಲ್ಲಿ ಒಂದು ಸಾವಿರ ಕೋಟಿ ರೂ ವೆಚ್ಚದ ರಸ್ತೆಗಳ ಅಭಿವೃದ್ಧಿಯ ಕಲ್ಯಾಣ ಪಥ ಉದ್ಘಾಟನೆ ಮಾಡುತ್ತಿದ್ದೇವೆ. ಅವರಿಗೂ ಕರೆಯುತ್ತೇವೆ. ಅವರೂ ಬರಲಿ ಎಂದು ಸವಾಲು ಹಾಕಿದರು.
ಅಂಕಿ ಅಂಶ ತೋರಿಸಿ ವಿಜಯೇಂದ್ರ ಮಾತನಾಡಲಿ. ಸಾಲ ಮಾಡಿ ತುಪ್ಪಾ ತಿಂದಿರುವವರು ಅವರು. ಆದರೆ ಸಾಲದ ಬಡ್ಡಿ ಕಟ್ಟುತ್ತಿರುವವರು ನಾವು ಎಂದು ಕಿಡಿಕಾರಿದರು.
ಮೈಸೂರಿನಲ್ಲಿ ನಿಷೇಧಾಜ್ಞೆ ಹೇರಿದ್ದಕ್ಕಾಗಿ ಬಿಜೆಪಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿ, ನಿಷೇಧಾಜ್ಞೆ ಹೇರುವಿಕೆಯನ್ನು ಯಾವ ಬಣ ವಿರೋಧಿಸುತ್ತಿದೆ. ಪ್ರತಿಭಟನೆ ನಡೆಸುತ್ತಿರುವುದು ಅಧಿಕೃತ ಬಿಜೆಪಿಯೋ ಅಥವಾ ಅನಧಿಕೃತ ಬಿಜೆಪಿಯಿಂದ ಪ್ರತಿಭಟನೆ ನಡೆಯುತ್ತಿದೆಯೋ ಎಂಬುದು ತಿಳಿಯುತ್ತಿಲ್ಲ. ಇದು ಬಿಜೆಪಿ ಬಣ ಪಾಲಿಟೆಕ್ಸ್ ಎತ್ತಿ ತೋರಿಸುತ್ತದೆ. ವಕ್ಫ್ ವಿಚಾರದಲ್ಲಿ ಒಂದು ಬಣ ಪ್ರತಿಭಟನೆ ಮಾಡುತ್ತದೆ ಎಂದರು, ಆದರೆ ಮಾಡಲಿಲ್ಲ. ದರ ಎರಿಕೆ ಬಗ್ಗೆ ಇನ್ನೊಂದು ಬಣ ಪ್ರತಿಭಟನೆ ಮಾಡುತ್ತದೆ ಎಂದರು. ಅದೂ ಮಾಡಲಿಲ್ಲ. ಈಗ ಯಾವ ಬಣದವರು ಮಾಡುತ್ತಿದ್ದಾರೆ ಮೊದಲು ಹೇಳಬೇಕು. ಅದಲ್ಲದೆ ಎಲ್ಲಾ ಮುಗಿದ ಮೇಲೆ ಅಲ್ಲಿಗೆ ಹೋಗುತ್ತಿರುವುದಾದರೂ ಯಾಕೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವುದಕ್ಕಾಗಿಯೇ ಅಲ್ಲಿಗೆ ಹೋಗುತ್ತಿರುವುದು ಎಂದು ಟೀಕಿಸಿದರು.
ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆಯನ್ನು ನಾನೂ ಬಲವಾಗಿ ಖಂಡಿಸುತ್ತೇನೆ. ಆದರೆ, ಕೇಂದ್ರದಲ್ಲಿ ಬಿಜೆಪಿ ಅವರದ್ದೇ ಹಾಗೂ ಮಹಾರಾಷ್ಟ್ರದಲ್ಲೂ ಅವರದ್ದೇ ಸರಕಾರವಿದೆ. ಡಬಲ್ ಇಂಜಿನ್ ಸರಕಾರ ಅವರದ್ದೇ ಇದೆ. ಹೀಗೆಲ್ಲಾ ಮಾಡಬಾರದು ಅಂತ ಅವರೇ ಹೇಳಲಿ. ಕೇಂದ್ರ ಸರಕಾರ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿಯವರು ಜಾಗೃತಿ ಮೂಡಿಸಲಿ. ನೆಲ ಜಲದ ವಿಚಾರ ಬಂದಾಗ ನಮಲ್ಲಿ ಮುಲಾಜೇ ಇಲ್ಲ. ನಮ್ಮ ಗಡಿ ಸಂರಕ್ಷಣೆ ಹಾಗೂ ಕನ್ನಡಿಗರ ಅಭಿವೃದ್ಧಿಯೇ ನಮ್ಮ ಆದ್ಯತೆ ಎಂದು ತಿಳಿಸಿದರು.