ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ 
ರಾಜಕೀಯ

ಆಂತರಿಕ ಬಿಕ್ಕಟ್ಟು ನಡುವಲ್ಲೇ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ

ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಕರೆಯಲಾಗುತ್ತಿರುವ ಮೊದಲ ಶಾಸಕಾಂಗ ಪಕ್ಷದ ಸಭೆ ಇದಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಬಿಕ್ಕಟ್ಟು ಜೋರಾಗಿ ಸದ್ದು ಮಾಡುತ್ತಿದ್ದು, ಇದರ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವರು, ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ.

ಜನವರಿ 13 ಸೋಮವಾರ ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಸಭೆ ನಡೆಯಲಿದೆ.

ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಕರೆಯಲಾಗುತ್ತಿರುವ ಮೊದಲ ಶಾಸಕಾಂಗ ಪಕ್ಷದ ಸಭೆ ಇದಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ವಾರ ಡಿಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಇಲ್ಲದಿರುವಾಗ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ನಡೆದಿತ್ತು. ಆ ಡಿನ್ನರ್ ಮೀಟಿಂಗ್‌ನಲ್ಲಿ ಕೇವಲ ಸಿದ್ದರಾಮಯ್ಯ ಆಪ್ತ ಬಣದ ಸಚಿವರು ಮತ್ತು ಶಾಸಕರು ಮಾತ್ರ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಸಹ ಡಿನ್ನರ್ ಮೀಟಿಂಗ್ ಕರೆದಿದ್ದರು. ಆದರೆ, ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ ಡಿನ್ನರ್ ಮೀಟಿಂಗ್‌ಗೆ ಬ್ರೇಕ್ ಹಾಕಿದೆ.

ಇದೇ ವಿಚಾರ ಈಗ ಕಾಂಗ್ರೆಸ್ ಪಕ್ಷದಲ್ಲಿ ಜೋರಾಗಿ ಚರ್ಚೆಯಾಗುತ್ತದೆ. ಡಿನ್ನರ್ ಮೀಟಿಂಗ್ ಯಾಕೆ ಮಾಡಿದರು? ರದ್ದುಗೊಂಡಿದ್ದು ಏಕೆ? ಎಂಬ ಪ್ರಶ್ನೆಗಳು ಮೂಡಿವೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಸೋಮವಾರ ಸಂಜೆ ದಿಢೀರ್ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.

ಈ ನಡುವೆ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ಕಾರ್ಯಕ್ರಮವನ್ನು ಜನವರಿ 21ರಂದು ನಡೆಸಲು ನಿರ್ಧರಿಸಿಸಿದ್ದಾರೆ. ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಲು ಮುಂದಾಗಿದ್ದಾರೆ.

ಡಿನ್ನರ್ ಮೀಟಿಂಗ್ ವಿಚಾರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿಯಂತೆಯೇ ತಮ್ಮ ಪಕ್ಷ ಕೂಡ ಆಂತರಿಕ ಬಿಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ ಎಂದು ಭಾವಿಸಿರುವ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಇಬ್ಬರಿಗೂ ಹಾನಿ ನಿಯಂತ್ರಿಸುವಂತೆ ಸೂಚನೆ ನೀಡಿದೆ ಎಂದು ಡಿಕೆ.ಶಿವಕುಮಾರ್ ಅವರ ಆಪ್ತ ಶಾಸಕರೊಬ್ಬರು ಹೇಳಿದ್ದಾರೆ.

ಆಂತರಿಕ ಬಿಕ್ಕಟ್ಟು ಹೆಚ್ಚಾಗುವ ಸುಳಿವು ಸಿಗುತ್ತಿದ್ದಂತೆಯೇ ಡಿಕೆ.ಶಿವಕುಮಾರ್ ಅವರು, ಗೃಹ ಸಚಿವ ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ​​ಮುನಿಯಪ್ಪ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ಮೂಲಕ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶ ಸಾರುವ ಪ್ರಯತ್ನ ಮಾಡಿದ್ದು, ಸ್ಪಷ್ಟವಾಗಿ ಕಂಡು ಬಂದಿತು.

ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಮೌಲ್ಯಗಳನ್ನು ಉಳಿಸಲು, ಸಂವಿಧಾನವನ್ನು ರಕ್ಷಿಸಲು ಮತ್ತು ನಮ್ಮ ಪಕ್ಷದ ತತ್ವಗಳನ್ನು ಉತ್ತೇಜಿಸಲು ಸಿಎಲ್‌ಪಿ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ನಾವು ಹಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತೇವೆಂದು ಡಿಕೆ.ಶಿವಕುಮಾರ್ ಅವರು ಹೇಳಿದರು.

ಪಕ್ಷದಲ್ಲಿನ ಬಿಕ್ಕಟ್ಟು ಶಮನಕ್ಕಾಗಿ ಸಭೆ ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮಲ್ಲಿ ಬಿಕ್ಕಟ್ಟಿದೆ ಎಂದು ಹೇಳಿದವರು ಯಾರು? ನಮ್ಮಲ್ಲಿ ಯಾರಿಗೂ ಬಿಕ್ಕಟ್ಟಿಲ್ಲ. ಬಿಕ್ಕಟ್ಟಿದ್ದರೆ ನಿಮ್ಮಲ್ಲೇ (ಮಾಧ್ಯಮದವರಿಗೆ) ಇರಬೇಕು. ಸದ್ಯಕ್ಕೆ ಈ ಬಗ್ಗೆ ಹೆಚ್ಚೇನೂ ಮಾತನಾಡುವುದಿಲ್ಲ ಎಂದು ತಿಳಿಸಿದರು.

ಅಧಿಕಾರ ಹಂಚಿಕೆ ಕುರಿತ ಊಹಾಪೋಹಗಳಿಗೆ ಉತ್ತರಿಸಿ, ಯಾವ ಹೇಳಿಕೆಯೂ ಇಲ್ಲ. ಕಾಂಗ್ರೆಸ್ ಕಚೇರಿಯಲ್ಲಿ ನಾನು, ಸರ್ಕಾರದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯೇ ಅಂತಿಮ. ಬೇರೆ ಹೇಳಿಕೆಗಳಿಗೆ ಬೆಲೆ ಇರುವುದಿಲ್ಲ ಎಂದರು.

ಸಚಿವ ರಾಜಣ್ಣ ಹೇಳಿಕೆ ಕುರಿತು ಮಾತನಾಡಿ, ಅದರ ಬಗ್ಗೆ ನನಗೆ ತಿಳಿದಿಲ್ಲ. ಅದರ ಬಗ್ಗೆ ತಿಳಿದುಕೊಂಡು ನಿಧಾನವಾಗಿ ಉತ್ತರಿಸುತ್ತೇನೆ ಎಂದಷ್ಟೇ ಹೇಳಿದರು.

ಪರಮೇಶ್ವರ್ ಅವರು ಮಾತನಾಡಿ, ನಮ್ಮ ಸಮುದಾಯದ (ಎಸ್‌ಸಿ ಎಸ್‌ಟಿ) ಸಮಾವೇಶ ಸಭೆ ಮಾಡಿದರೆ ಸಹಿಸುವುದಿಲ್ಲ ಎಂದು ಯಾರಾದರೂ ಹೇಳಿದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಆ ಶಕ್ತಿ ನಮಗಿದೆ ಎಂದು ಹೇಳಿದರು.

‘ಔತಣಕೂಟವನ್ನು ರದ್ದು ಮಾಡಿಲ್ಲ. ಮುಂದೂಡಿದ್ದೇವೆ ಅಷ್ಟೆ. ನಮ್ಮ ಔತಣಕೂಟಕ್ಕೆ ಹೈಕಮಾಂಡ್ ವಿರೋಧ ಇಲ್ಲ. ಚಿತ್ರದುರ್ಗ ಸಮಾವೇಶ ಬಗ್ಗೆ ಚರ್ಚಿಸಲು ಈ ಸಭೆ ಕರೆದಿದ್ದೆವು. ಔತಣಕೂಟ ಬಗ್ಗೆ ವರಿಷ್ಠರಿಗೆ ಏನೂ ಹೇಳಿರಲಿಲ್ಲ. ಶಾಸಕರ ಸಭೆ ಅಂದಾಗ ವರಿಷ್ಠರ ಗಮನಕ್ಕೆ ಹೋಗುತ್ತದೆ. ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರೆ ಮಾಡಿ ಅವರೂ ಭಾಗವಹಿಸಲು ಉತ್ಸುಕವಾಗಿರುವುದಾಗಿ ತಿಳಿಸಿದರು. ಹೀಗಾಗಿ ಅವರಿಗೂ ಆಹ್ವಾನ ಕೊಟ್ಟಿದ್ದೇವೆ. ಮುಂದೆ ಸಮಯ ಕೊಡುತ್ತೇನೆಂದು ಅವರು ನಮಗೆ ಹೇಳಿದ್ದಾರೆ. ಹೀಗಾಗಿ ಔತಣಕೂಟ ಮುಂದೂಡಿದ್ದೇವೆಂದು ಸ್ಪಷ್ಟಪಡಿಸಿದರು.

ನಮ್ಮ ಸಭೆಗೆ ಡಿ.ಕೆ. ಶಿವಕುಮಾರ್​​ ಅವರನ್ನೂ ಕರೆಯಬೇಕೆಂದು ಚರ್ಚೆ ಆಗಿತ್ತು. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಮುಚ್ಚಿಟ್ಟುಕೊಂಡು ರಾಜಕಾರಣ ಮಾಡುವಂಥದ್ದು ಏನಿದೆ? ಯಾವುದಾದರು ವಿಷಯದ ಬಗ್ಗೆ ಚರ್ಚೆ ಮಾಡುವುದಾದರೆ ಬಹಿರಂಗವಾಗಿಯೇ ಮಾಡುತ್ತೇವೆ. ಯಾರಿಗೂ ಗೊತ್ತಾಗದಂತೆ ನಾಲ್ಕು ಗೋಡೆ‌ ಮಧ್ಯೆ ಚರ್ಚಿಸುವಂಥ ಅನಿವಾರ್ಯ ಇಲ್ಲ’ ಎಂದರು.

ಹಲವು ಜ್ವಲಂತ ಸಮಸ್ಯೆಗಳಿವೆ. ದೌರ್ಜನ್ಯ ಪ್ರಕರಣಗಳು ಸೇರಿದಂತೆ ದಲಿತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಾವು ಚರ್ಚಿಸಬೇಕಲ್ಲವೇ? ಹೈಕಮಾಂಡ್ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳುವುದು ಒಳ್ಳೆಯದಲ್ಲವೇ ಎಂದು ಪ್ರಶ್ನಿಸಿದರು. ಇದೇ ವೇಳೆ ಮುಂದಿನ ದಿನಗಳಲ್ಲಿ ಸಭೆ ನಡೆಸಲಾಗುವುದು ಎಂದೂ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT