ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆಯಾಗಲಿದೆ ಎಂದು ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ಅವರು ಶನಿವಾರ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಸಿಎಂ ಆದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆಯಾಗಲಿದೆ. ಪಕ್ಷದ ಹೈಕಮಾಂಡ್ ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಅಲ್ಲದೆ, ಪಕ್ಷದೊಳಗೆ ಯಾರೂ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿಲ್ಲ ಎಂದು ಹೇಳಿದರು.
7-8 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಿಎಂ ಆಗಲು ಅರ್ಹರಾದ ಹಲವು ನಾಯಕರು ನಮ್ಮ ಪಕ್ಷದಲ್ಲಿದ್ದಾರೆ. ಹೀಗಾಗಿ ಉನ್ನತ ಹುದ್ದೆಗೆ ಪೈಪೋಟಿ ಇರುವುದು ಸಹಜ, ಹೈಕಮಾಂಡ್ ಸೂಚನೆಯ ನಡುವೆಯೂ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತು ಕೆಲ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳಲ್ಲಿ ಇಂತಹ ಪರಿಸ್ಥಿತಿ ಸಾಮಾನ್ಯ, ನಮ್ಮದು ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಪಕ್ಷವಲ್ಲ. ಬೇರೆ ಪಕ್ಷಗಳಂತೆ ಕಾಂಗ್ರೆಸ್ ಕುಟುಂಬದ ಹಿಡಿತದಲ್ಲಿಲ್ಲ. ಪಕ್ಷದ ಹೈಕಮಾಂಡ್ ಬಲಿಷ್ಠವಾಗಿದ್ದು, ಎಲ್ಲವನ್ನೂ ಸರಿ ಮಾಡಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ನನ್ನ ಹಿರಿತನ ಪರಿಗಣಿಸಿ ಸಂಪುಟದಲ್ಲಿ ಅವಕಾಶ ಕೊಡುವ ವಿಶ್ವಾಸವಿದೆ. ಆದರೆ, ನಾವು ಏನೇ ಹೇಳಿದರೂ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದರು