ಮೈಸೂರು: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರಂಭಿಸಲಾದ 500 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಗೆ ಮೇಕೆದಾಟು ಯೋಜನೆ ಎಂದು ಮರುನಾಮಕರಣ ಮಾಡಲಾಗಿದೆಯಷ್ಟೇ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಗುರುವಾರ ಆರೋಪಿಸಿದ್ದಾರೆ.
ಗುರುವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾಗ ಜಲವಿದ್ಯುತ್ ಯೋಜನೆಯಡಿ 500 ಮೆಗಾ ವ್ಯಾಟ್ ಉತ್ಪಾದನೆಗೆ ಮುಂದಾಗಿ ವಿಸ್ತ್ರತ ಯೋಜನಾ ವರದಿ ತಯಾರಿಸಲಾಗಿತ್ತು. ಅಂದಿನ ಇಲಾಖೆ ಕಾರ್ಯದರ್ಶಿ ಕೆ.ಸಿ. ರೆಡ್ಡಿ ಅವರು ಡಿಪಿಆರ್ ತಯಾರಿಸುವ ಹೊತ್ತಿಗೆ ಸರ್ಕಾರ ಬಿದ್ದು ಹೋಯಿತು. ಈ ಯೋಜನೆಗೆ ಈಗ ಮೇಕೆದಾಟು ಹೆಸರನ್ನು ಇಡಲಾಗಿದೆ. ಮೇಕೆದಾಟು ಯೋಜನೆ ಮಾಡಿದ ಮೇಲೆ ನೋಡೋಣ ಎಂದು ಹೇಳಿದರು.
ಸೆಸ್ಕ್ ಸ್ಥಾಪಿಸಿ 5 ಜಿಲ್ಲೆಗಳಲ್ಲಿ ವಿದ್ಯುತ್ ಸುಧಾರಣೆ ತರಲಾಯಿತು. ಮಂಡ್ಯ ಜಿಲ್ಲೆ ಯಲ್ಲಿ ಎಸ್‌ಇ, ಪಾಂಡವಪುರ, ನಾಗ ಮಂಗಲ ತಾಲೂಕುಗಳಲ್ಲಿ ಇಇ ಕಚೇರಿ, ಹಾಸನ ಜಿಲ್ಲೆಗಳಲ್ಲಿ ಎಸ್‌ಇ ಕಚೇರಿ ಆರಂಭಿ ಸಿ ಹೊಸ ಸ್ಟೇಷನ್ ರಚಿಸಲಾಯಿತು. ನಾನು ಸಚಿವನಾಗಿದ್ದಾಗ 5 ಪೈಸೆ ವಿದ್ಯುತ್ ದರ ಹೆಚ್ಚಳ ಮಾಡಲಿಲ್ಲ. ಅಧಿಕಾರದಿಂದ ಇಳಿಯುವಾಗ 500 ಕೋಟಿ ಎಫ್.ಡಿ ಇಡುವಂತೆ ಮಾಡಿದ್ದೆ. ಈಗ ಇಂಧನ ಇಲಾ ಖೆಯಲ್ಲಿ 55 ಸಾವಿರ ಕೋಟಿ ರೂ.ಸಾಲ ಇದೆ ಎಂದು ಆರೋಪಿಸಿದರು.
ಸ್ಮಾರ್ಟ್ ಅಳವಡಿಕೆ ವಿಚಾರ ನನಗೆ ಗೊತ್ತಿಲ್ಲ. ಮೊದಲಿಗೆ ಮೈಸೂರು, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಬೆಸ್ಕಾಂನಲ್ಲಿ ಹಲವಾರು ಸುಧಾರಣಾ ಕ್ರಮ ಕೈಗೊಳ್ಳಲಾಗಿತ್ತು. ಈಗ ಬರೀ ನಷ್ಟದ ವಿಷಯ ಮಾತ್ರ ಕೇಳುತ್ತಿದ್ದೇವೆ. ಜೆಡಿಎಸ್ ನಲ್ಲಿ ಸಣ್ಣಪುಟ್ಟ ಗೊಂದಲ ಇರುವುದು ಸಹಜ. ರಾಷ್ಟ್ರೀಯಪಕ್ಷಗಳಲ್ಲಿಗೊಂದಲ, ಭಿನ್ನಾಭಿಪ್ರಾಯ ಇರುವುದನ್ನು ನಾವು ನೋಡುತ್ತಿಲ್ಲವೇ, ನಮ್ಮದೊಂದು ಸಣ್ಣ ಪಕ್ಷ. ಜಿ.ಟಿ. ದೇವೇಗೌಡರು ದೂರವಾಗಲ್ಲ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ. ಜಿ.ಟಿ. ದೇವೇಗೌಡರು ಸಮಯ ಬಂದಾಗ ನಮ್ಮೊಂದಿಗೆ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಅದು ನಮ್ಮ ಪಕ್ಷವೂ ಅಲ್ಲ, ಅವರ ಹೈಕಮಾಂಡ್ ನಾಯಕರು ಇದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೋ, ಇಲ್ಲವೋ ನಾನು ಹೇಗೆ ಹೇಳಲಿ ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ಮುಖ್ಯಮಂತ್ರಿಗಳಾಗಿದ್ದಾರೆ. ಗಣಿಗ ರವಿಕುಮಾರ್ ಮುಂದೆ ಮುಖ್ಯ ಮಂತ್ರಿಯಾದರೂ ಸಂತೋಷ. ಅವರಿಗೆ ಅವಕಾಶ ಸಿಕ್ಕಿದರೆ ಬೇಡ ಎನ್ನಲಾಗುತ್ತದೆಯೇ ಎಂದು ಪಕ್ಕದಲ್ಲಿ ಕುಳಿತಿದ್ದ ಗಣಿಗ ರವಿಕುಮಾರ್ ರತ್ತ ನೋಡಿ ಹೇಳಿದರು.