ಬೆಂಗಳೂರು: ರೈತರ ಆತ್ಮಹತ್ಯೆ ಕುರಿತು ಸುಳ್ಳು ಸುದ್ದಿ ಹರಿಬಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸ್ ರದ್ದುಪಡಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾ ಮಾಡಿರುವುದನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೋಮವಾರ ಸ್ವಾಗತಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಪಾಠವಾಗಬೇಕು ಎಂದು ಅವರು ಹೇಳಿದ್ದಾರೆ. ಹಾವೇರಿ ಜಿಲ್ಲೆಯಲ್ಲಿನ ರೈತರೊಬ್ಬ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯನ್ನು ಹರಡಿದ್ದ ಆರೋಪಕ್ಕೆ ತೇಜಸ್ವಿ ಸೂರ್ಯ ಗುರಿಯಾಗಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ನಕಲಿ ಸುದ್ದಿ ಹರಡಿದ್ದ ಆರೋಪದಲ್ಲಿ ಸಚಿವರೊಬ್ಬರ ಅಪ್ಪಣೆಯಂತೆ ಕರ್ನಾಟಕ ಸರ್ಕಾರ ನನ್ನ ವಿರುದ್ಧ ಎಫ್ ಐಆರ್ ದಾಖಲಿಸಿತ್ತು. ಹೈಕೋರ್ಟ್ ಅದನ್ನು ರದ್ದುಗೊಳಿಸಿತ್ತು. ಆದರೆ ಅವರ ಸೇಡಿನ ರಾಜಕಾರಣದಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಸುಪ್ರೀಂಕೋರ್ಟ್ ಕೇವಲ ಅವರ ಅರ್ಜಿಯನ್ನು ಮಾತ್ರ ವಜಾಗೊಳಿಸಿಲ್ಲ. ದಂಡವನ್ನು ವಿಧಿಸಿದೆ. ಪ್ರಕರಣವನ್ನು ರಾಜಕೀಯಗೊಳಿಸಬಾರದು ಎಂದು ಅವರಿಗೆ ಎಚ್ಚರಿಕೆ ನೀಡಿದೆ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ತನ್ನ ವಿರುದ್ಧ ರಾಜಕೀಯ ಲೆಕ್ಕಾಚಾರದಿಂದ ನಿರಂತರವಾಗಿ ಸುಳ್ಳು ಮಾಹಿತಿ ಹಬ್ಬಿಸುತ್ತಿದೆ. ತನ್ನ ರಾಜಕೀಯ ಉದ್ದೇಶ ಈಡೇರಿಕೆಗಾಗಿ ಪೊಲೀಸ್ ಮತ್ತು ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ತೀರ್ಪು ಒಂದು ಪಾಠವಾಗಬೇಕು ಎಂದಿದ್ದಾರೆ ಎಂದಿದ್ದಾರೆ.
ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಕಾನೂನು ಪ್ರಕ್ರಿಯೆಗಳನ್ನು ರಾಜಕೀಯಗೊಳಿಸುವುದರ ವಿರುದ್ಧ ಎಚ್ಚರಿಕೆ ನೀಡಿದೆ. "ಇದೇನು? ಈ ವಿಷಯವನ್ನು ರಾಜಕೀಯಗೊಳಿಸಬೇಡಿ. ಮತದಾರರ ಮುಂದೆ ನಿಮ್ಮ ಹೋರಾಟಗಳನ್ನು ಮಾಡಿ" ಎಂದು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ಹೇಳಿದೆ.
ನವೆಂಬರ್ 7, 2024 ರಂದು ಸೂರ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಕನ್ನಡ ನ್ಯೂಸ್ ಪೋರ್ಟಲ್‌ಗಳ ವರದಿಯೊಂದನ್ನು ಉಲ್ಲೇಖಿಸಿ, ವಕ್ಫ್ ಮಂಡಳಿ ಭೂಮಿ ಕಸಿದುಕೊಂಡ ನಂತರ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದರು. ಬಳಿಕ ಅದು ಸುಳ್ಳು ಎಂಬುದು ಕಂಡುಬಂದ ನಂತರ ಈ ಪೋಸ್ಟ್ ನ್ನು ಡಿಲೀಟ್ ಮಾಡಿದ್ದರು.