ಬಿಜೆಪಿ, ಕಾಂಗ್ರೆಸ್ ಧ್ವಜದ ಸಾಂದರ್ಭಿಕ ಚಿತ್ರ  
ರಾಜಕೀಯ

MUDA ಕೇಸ್: ಸಿಎಂ ಪತ್ನಿ ಗುರಿಯಾಗಿಸಿಕೊಂಡ BJP-JDS ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಪಾರ್ವತಿ ಸಿದ್ದರಾಮಯ್ಯ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ನೀಡಲಾದ ನೋಟಿಸ್ ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ, ಏಕೆಂದರೆ ಈ ಪ್ರಕರಣವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲ.

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ವಿರುದ್ಧ ಇಡಿ ನೋಟಿಸ್ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಪಾರ್ವತಿ ಸಿದ್ದರಾಮಯ್ಯ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ನೀಡಲಾದ ನೋಟಿಸ್ ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ, ಏಕೆಂದರೆ ಈ ಪ್ರಕರಣವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲ. "ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇದೆ. ಇದನ್ನು ರಾಜಕೀಯಗೊಳಿಸಬೇಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ಇಡೀ ದೇಶಕ್ಕೆ ಅನ್ವಯಿಸುತ್ತದೆ. ಅವರಿಗೆ ಆತ್ಮಸಾಕ್ಷಿ ಉಳಿದಿದ್ದರೆ ಅವರು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಮತ್ತು ಕಾಂಗ್ರೆಸ್ ಶಾಸಕ ಪೊನ್ನಣ್ಣ ಅವರು ಹೇಳಿದ್ದಾರೆ.

ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮುಡಾ ನಿವೇಶನಗಳನ್ನು ಮಂಜೂರು ಮಾಡಿದಾಗ ಬೈರತಿ ಸುರೇಶ್ ಸಚಿವರಾಗಿದ್ದರೇ? ಬಿಜೆಪಿ ನಾಯಕರು ಪಾರ್ವತಿ ಅವರ ವೈಯಕ್ತಿಕ ವಿಷಯವನ್ನು ತಮ್ಮ ರಾಜಕೀಯಕ್ಕೆ ಎಳೆದುತಂದಿದ್ದು, ಇದು ಸರಿಯಲ್ಲ ಎಂದು ತಿಳಿಸಿದರು.

ಭೈರತಿ ಸುರೇಶ್ ಅವರು ಮಾತನಾಡಿ, ಮುಡಾ ಪ್ರಕರಣದಲ್ಲಿ ನಾನು, ಸಿಎಂ ಮತ್ತು ಅವರ ಪತ್ನಿಯ ಯಾವುದೇ ಪಾತ್ರವಿಲ್ಲ ಎಂದು ಮೊದಲಿನಿಂದಲೂ ಹೇಳುತ್ತಿದ್ದೆ. ಸುಳ್ಳು ಆರೋಪಗಳನ್ನು ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ತೀರ್ಪು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಪಾಠವಾಗಬೇಕು. ಇದೀಗ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಮ್ಮ ಹೇಳಿಕೆಗಳ ಕುರಿತು ಹೆಚ್ಚು ಜಾಗರೂಕರಾಗಿರಬೇಕು, ಎಂದು ಹೇಳಿದರು. ಇದೇ ವೇಳೆ ಸುಳ್ಳು ಆರೋಪ ಮಾಡಿದ ಅಶೋಕ್ ಮತ್ತು ವಿಜಯೇಂದ್ರ ರಾಜೀನಾಮೆ ನೀಡಬೇಕೆಂದೂ ಒತ್ತಾಯಿಸಿದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ‌ ಅವರು ಪ್ರತಿಕ್ರಿಯಿಸಿ, ಇಡಿ-ಬಿಜೆಪಿ ಪಾಲುದಾರಿಕೆಯ ನಕಲಿ ಪ್ರಚಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸುಳ್ಳು ಆರೋಪಗಳನ್ನು ಸೃಷ್ಟಿಸಿತ್ತು. ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿತ್ತು. ಸತ್ಯ ಗೆದ್ದಿದೆ, ಸತ್ಯಮೇವ ಜಯತೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತು ಅವರ ಪತ್ನಿ ವಿರುದ್ಧ ಮುಡಾ ಹಗರಣ ಆರೋಪದಲ್ಲಿ ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದೆ. ದುರುದ್ದೇಶಪೂರ್ವಕವಾಗಿ ಸಿಎಂ ವಿರುದ್ಧ ಮುಡಾ ಕುರಿತು ಸುಳ್ಳು ಆರೋಪಗಳನ್ನು ಹೊರಿಸಿತ್ತು. ಇದಕ್ಕೂ ಮುನ್ನ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿತ್ತು. ಈ ಮೂಲಕ ಇಡಿ-ಬಿಜೆಪಿ ಪಾಲುದಾರಿಕೆಯ ನಕಲಿ ಪ್ರಚಾರವನ್ನು ತಿರಸ್ಕರಿಸಿ ರದ್ದುಗೊಳಿಸಿದೆ ಎಂದು ತಿಳಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರತಿಕ್ರಿಯಿಸಿ, ವಿಧಾನಸಭೆಯಲ್ಲಿನ ಪ್ರತಿ ಪಕ್ಷದ ನಾಯಕರಾದ ಆರ್.ಅಶೋಕ್‌ ಮತ್ತು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಲ್ಲಿ ಕಿಂಚಿತ್ತು ನಾಚಿಕೆ ಎನ್ನುವುದು ಉಳಿದಿದ್ದರೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಬಿಜೆಪಿ ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ದೆಹಲಿ ಯಜಮಾನರು ಹೇಳಿದಂತೆ ನಿರಂತರ ಅಪಪ್ರಚಾರ ನಡೆಸಿದರು. ಬಿಜೆಪಿ ಸುಳ್ಳು ಆರೋಪಗಳನ್ನು ಮಾಡಿ, ನಕಲಿ ಈಡಿ ದಾಳಿಗಳನ್ನು ಮಾಡಿಸಿತು ಮತ್ತು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿತು. ಈ ಸಂಬಂಧ ಹೈಕೋರ್ಟ್ ಮತ್ತು ಈಗ ಸುಪ್ರೀಂ ಕೋರ್ಟ್ ಎರಡೂ ಬಿಜೆಪಿ ಸುಳ್ಳುಗಳನ್ನು ಬಹಿರಂಗಪಡಿಸಿವೆ. ಇಡಿ-ಬಿಜೆಪಿ ನಡುವಿನ ಸಂಬಂಧ ಮತ್ತು ಪಿತೂರಿ ಬಹಿರಂಗಗೊಂಡಿದ್ದು, ಬಿಜೆಪಿ ಹೂಡಿದ ಸಂಚು ಛಿದ್ರಗೊಂಡಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮದ್ದೂರಿನಲ್ಲಿ ಅದ್ಧೂರಿ ಸಾಮೂಹಿಕ ಗಣೇಶ ವಿಸರ್ಜನೆ; ಬಿಜೆಪಿ ನಾಯಕರು ಭಾಗಿ, ಸರ್ಕಾರದ ವಿರುದ್ಧ ವಾಗ್ದಾಳಿ

ಸೇನೆ ಮಧ್ಯಪ್ರವೇಶ; ಸುಧಾರಣೆಗೆ ಪ್ರತಿಭಟನಾಕಾರರ ಕರೆ: ಸಹಜ ಸ್ಥಿತಿಯತ್ತ ನೇಪಾಳ; Video

'ನೇಪಾಳ ಪರಿಸ್ಥಿತಿ ನೋಡಿ': AAP ಶಾಸಕ ಮೆಹ್ರಾಜ್ ಮಲಿಕ್ ವಿರುದ್ಧ FIR ದಾಖಲಿಸಿದ್ದಕ್ಕೆ ಮುಫ್ತಿ ಆಕ್ರೋಶ, ಸರ್ಕಾರಕ್ಕೆ ಎಚ್ಚರಿಕೆ!

ದೆಹಲಿ: ಕಾರಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಕ್ಯಾಬ್ ಚಾಲಕನ ಬಂಧನ

ನಾಳೆ ವಾರಣಾಸಿಯಲ್ಲಿ ಮಾರಿಷಸ್ ಪ್ರಧಾನಿ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ

SCROLL FOR NEXT