ಬೆಂಗಳೂರು: ಮುಡಾ ಹಗರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದಾದರೆ 14 ನಿವೇಶನಗಳನ್ನೇಕೆ ವಾಪಸ್ ನೀಡಿದಿರಿ? ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬಿಎಂ ಅವರನ್ನು ವಿಚಾರಣೆಗೊಳಪಡಿಸುವಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದ್ದು, ಈ ಸಂಬಂಧ ಅಶೋಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಕೇಸ್ ವಿಚಾರವಾಗಿ ಬಿಜೆಪಿ ಹೋರಾಟ ಮಾಡಿತ್ತು. ನಮ್ಮ ಹೋರಾಟದ ಫಲವಾಗಿ 14 ಸೈಟ್ ಗಳನ್ನು ಸಿದ್ದರಾಮಯ್ಯ ಅವರು ವಾಪಸ್ ಕೊಟ್ಟಿದ್ದರು. ತಪ್ಪು ಮಾಡಿಲ್ಲ ಎಂದಾದರೆ ಸೈಟ್'ಗಳನ್ನೇಕೆ ವಾಪಸ್ ಕೊಟ್ಟರು ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕು. ಅದನ್ನು ನಾವು ಪ್ರಶ್ನೆ ಮಾಡುವುದಿಲ್ಲ. ಆದರೆ, ನಾನು ಕಾಂಗ್ರೆಸ್ ನವರಿಗೆ ಪ್ರಶ್ನೆ ಮಾಡುತ್ತಿದ್ದೇನೆ. ತಪ್ಪು ಮಾಡಿಲ್ಲದಿದ್ದರೆ ಸೈಟ್ ಯಾಕೆ ವಾಪಸ್ ನೀಡಿದಿರಿ? ಈಗ ಸರ್ಕಾರಕ್ಕೆ ಮರಳಿಸಿರುವ ಸೈಟನ್ನು ಮತ್ತೆ ವಾಪಸ್ ತಗೋತೀರಾ? ಎಂದು ಪ್ರಶ್ನಿಸಿದರು.
ಇದೇ ವೇಳೆ ಮುಡಾ ವಿರುದ್ಧ ಪಕ್ಷದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಹೋರಾಟ ಮುಂದುವರೆಯಲಿದೆ ಎಂದೂ ತಿಳಿಸಿದರು.
ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಇಡಿ ತನಿಖೆಯ ಸಮಯದಲ್ಲಿಯೂ ಹಲವು ದಾಖಲೆಗಳು ನಾಪತ್ತೆಯಾಗಿವೆ. ಅನೇಕ ದಾಖಲೆಗಳು ನಾಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣದಲ್ಲಿ ಭ್ರಷ್ಟಾಚಾರವಿದೆ, ಅದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸರಿಯಾದ ಪುರಾವೆಗಳನ್ನು ನೀಡಬೇಕಾಗಿದೆ. ಆದರೆ, ಈ ಪ್ರಕರಣದಲ್ಲಿ, ಸಿಎಂ ಸ್ವತಃ ಭಾಗಿಯಾಗಿದ್ದಾರೆ. ಸಿಎಂ ಅವರನ್ನು ರಕ್ಷಿಸಲು ಬಯಸಿ ರಾಜ್ಯ ಸರ್ಕಾರವು ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ ಎಂದು ಕಿಡಿಕಾರಿದರು.