ದಾವಣಗೆರೆ: ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಇಬ್ಬರೂ ಒಂದಾಗಲಿ ಎಂದು ಬಯಸಿ ಅದಕ್ಕೆ ಅಡಿಪಾಯ ಹಾಕಿದ್ದೇ ನಾನು, ಇದೀಗ ಇಬ್ಬರೂ ಸೇರಿಕೊಂಡು, ನನಗೆ ಒಳ್ಳೆಯ ಗಿಫ್ಟ್ ಕೊಟ್ಟಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ರೆಡ್ಡಿ ಮತ್ತು ಶ್ರೀರಾಮುಲು ಇತ್ತೀಚಿಗಿನ ಬಿಜೆಪಿ ಕಾರ್ಯಕ್ರಮದಲ್ಲಿ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸಿದ ಸೋಮಣ್ಣ ನನಗೆ ಇಬ್ಬರೂ ಒಳ್ಳೆಯ ಗಿಫ್ಟ್ ನೀಡಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ನಮ್ಮಲ್ಲಿ ಯಾವುದೇ ಟೀಂ ಅಂತಾ ಇಲ್ಲ. ನಮ್ಮದು ಒಂದೇ ಹೈಕಮಾಂಡ್, ಒಬ್ಬರೇ ನಾಯಕರು. ರಾಜ್ಯಾಧ್ಯಕ್ಷರ ಬದಲಾವಣೆ ಎಂಬುದು ಹರಿಹರ ಶಾಸಕ ಬಿ.ಪಿ.ಹರೀಶ್ ಅವರ ಅಭಿಪ್ರಾಯ. ಬದಲಾವಣೆ ವಿಚಾರ ನನಗಂತೂ ಗೊತ್ತಿಲ್ಲ. ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪಕ್ಷಕ್ಕೆ ವಾಪಸ್ ಬರುವ ವಿಚಾರವೂ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಹಲವು ತಿಂಗಳಿಂದ ಮುನಿಸಿಕೊಂಡಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು, ಪರಸ್ಪರ ಕೈ ಕುಲುಕಿ ಒಗ್ಗಟ್ಟು ಪ್ರದರ್ಶಿಸಿದ್ದು, ಅಚ್ಚರಿಗೆ ಕಾರಣವಾಯಿತು. ತಾಲೂಕಿನ ಮರಳಿ ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಳ್ಳಾರಿ ವಿಭಾಗ ಮಟ್ಟದ ಬಿಜೆಪಿ ಸಂಘಟನಾ ಸಭೆ ನಡೆಯಿತು. ಸಭೆ ಆರಂಭಕ್ಕೂ ಪೂರ್ವದಲ್ಲಿ ವೇದಿಕೆಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇಬ್ಬರು ನಾಯಕರ ಕೈಗಳನ್ನು ಮೇಲಕ್ಕೆ ಎತ್ತಿ ಒಗ್ಗಟ್ಟು ಪ್ರದರ್ಶಿಸಿದ್ದಲ್ಲದೇ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಇಬ್ಬರು ಒಂದೇ ಎಂದು ಸಾರಿದರು.