ಬೆಂಗಳೂರು: ಭಾರತದ ಮೊದಲ ದೇಶಿ ನಿರ್ಮಿತ 8-ಕ್ವಿಟ್ ಕ್ವಾಂಟಮ್ ಕಂಪ್ಯೂಟರ್ ಅನ್ನು ಈ ನವೆಂಬರ್‌ನಲ್ಲಿ ಅಮರಾವತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಎನ್ ಎಸ್ ಬೋಸರಾಜು, ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿರುಗೇಟು ನೀಡಿದರು.
ಬೆಂಗಳೂರು ಮೂಲದ QpiAI ನಿರ್ಮಿಸಿದ ಕ್ವಾಂಟಮ್ ಕಂಪ್ಯೂಟರ್ ಏಪ್ರಿಲ್ 2025 ರಿಂದ ವಾಣಿಜ್ಯ ಸೇವೆಗಳನ್ನು ಒದಗಿಸುತ್ತಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ನಮ್ಮ ರಾಜ್ಯವು ಈ ನವೆಂಬರ್‌ನಲ್ಲಿ ಅಮರಾವತಿಯಲ್ಲಿ QpiAI ಬೆಂಬಲದೊಂದಿಗೆ ಭಾರತದ ಮೊದಲ ದೇಶಿ ನಿರ್ಮಿತ 8-ಕ್ವಿಟ್ ಕ್ವಾಂಟಮ್ ಕಂಪ್ಯೂಟರ್ ಸೇವೆ ಆರಂಭವಾಗಲಿದೆ" ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ 'X' ನಲ್ಲಿ ಪೋಸ್ಟ್ ಮಾಡಿದ್ದರು.
ಈ ಘೋಷಣೆಗೆ ಪ್ರತಿಕ್ರಿಯಿಸಿದ ಬೋಸರಾಜು, "ದಾಖಲೆಗಾಗಿ, ಭಾರತದ ಮೊದಲ ಕ್ವಾಂಟಮ್ ಕಂಪ್ಯೂಟರ್ QpiAI ನಿಂದ ಬೆಂಗಳೂರಿನಲ್ಲಿ ಸ್ಥಳೀಯವಾಗಿ ನಿರ್ಮಿಸಲ್ಪಟ್ಟಿದೆ ಮತ್ತು ಏಪ್ರಿಲ್ 2025 ರಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿತು" ಎಂದು ಹೇಳಿದ್ದಾರೆ.
"INDUS ಎಂದು ಹೆಸರಿಸಲಾದ ಈ 25-ಕ್ವಿಟ್ ಕ್ವಾಂಟಮ್ ಕಂಪ್ಯೂಟರ್ ಈಗಾಗಲೇ ಆರೋಗ್ಯ, ರಕ್ಷಣೆ, ಅತ್ಯಾಧುನಿಕ ಸಂಶೋಧನೆ, ಹಣಕಾಸು ಮತ್ತು ಇತರ ಕ್ಷೇತ್ರಗಳಲ್ಲಿ ಸೇವೆಗಳನ್ನು ಒದಗಿಸುತ್ತಿದೆ" ಎಂದು ಅವರು ತಿಳಿಸಿದ್ದಾರೆ.