ದಾವಣಗೆರೆ: ಎಐಸಿಸಿ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ವಿರೋಧ ಪಕ್ಷಗಳು 'ಸೂಪರ್ ಸಿಎಂ' ಎಂದು ಕರೆಯುತ್ತಿರುವುದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭಾನುವಾರ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನಾ ತನ್ನ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಜಾರಿಗೆ ತರುತ್ತಿದೆಯೇ ಎಂಬುದನ್ನು ಗಮನಿಸಲು ಪಕ್ಷದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಸುರ್ಜೇವಾಲಾ ಅವರು ರಾಜ್ಯಕ್ಕೆ ಪದೇ ಪದೇ ಪ್ರವಾಸ ಮಾಡುವುದು ಸಹಜವಾಗಿದೆ ಎಂದು ಹೇಳಿದರು.
ಇತ್ತೀಚಿಗೆ ಸುರ್ಜೇವಾಲಾ ಅವರು ಆಡಳಿತರೂಢ ಶಾಸಕ ಮತ್ತು ಸಚಿವರೊಂದಿಗೆ ಒನ್ ಟು ಒನ್ ಸರಣಿ ಸಭೆ ಹಿನ್ನೆಲೆಯಲ್ಲಿ ಅವರನ್ನು ಸೂಪರ್ ಸಿಎಂ ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ವಾಗ್ದಾಳಿ ನಡೆಸುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಅವು ಕೇವಲ ಆರೋಪಗಳು. ಅದರಲ್ಲಿ ಯಾವುದೇ ಸತ್ಯವಿಲ್ಲ. ಸುರ್ಜೇವಾಲಾ ನಮ್ಮ ಪಕ್ಷದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ. ಅವರನ್ನು ಎಐಸಿಸಿ ನೇಮಿಸಿದೆ. ಅದರಲ್ಲಿ ಹೊಸದೇನೂ ಇಲ್ಲ. ಚುನಾವಣೆಗೂ ಮುನ್ನಾ ಸುರ್ಜೇವಾಲಾ ಇದ್ದರು. ಈಗಲೂ ಸಹ ಇದ್ದಾರೆ. ಸ್ವಾಭಾವಿಕವಾಗಿ, ಅವರು ಚುನಾವಣೆಗೆ ಮುನ್ನ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಸರ್ಕಾರ ಈಡೇರಿಸುತ್ತಿದೆಯೇ ಎಂಬುದನ್ನು ನೋಡಲು ರಾಜ್ಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ ಎಂದರು.
ಸುರ್ಜೇವಾಲಾ ಅವರು ಯಾವುದೇ ಅಧಿಕಾರಿಗಳ ಸಭೆ ನಡೆದಿಲ್ಲ ಅಥವಾ ಯಾವುದೇ ಸೂಚನೆಯನ್ನೂ ನೀಡಿಲ್ಲ. ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಉದ್ದೇಶಪೂರ್ವಕವಾಗಿ ಅನಗತ್ಯ ಆರೋಪಗಳನ್ನು ಮಾಡುತ್ತಿವೆ ಮತ್ತು ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸುರ್ಜೇವಾಲಾ ಅವರು ಶಾಸಕರು ಮತ್ತು ಸಚಿವರ ಜತೆ ಒನ್ ಟು ಒನ್ ಸಭೆ ನಡೆಸುತ್ತಿರುವುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಬಿಜೆಪಿಗೂ ಇದಕ್ಕೂ ಏನು ಸಂಬಂಧ? ಅವರ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸುವುದಿಲ್ಲವೇ? ಅದೇ ರೀತಿ ನಮ್ಮ ಪ್ರಧಾನ ಕಾರ್ಯದರ್ಶಿಗಳೂ ಬರುತ್ತಾರೆ. ನಾವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ನಮ್ಮ ಪಕ್ಷ ಪರಿಶೀಲಿಸಬೇಕಾದ ಅಗತ್ಯವಿರುತ್ತದೆ ಎಂದು ಹೇಳಿದರು.