ಬೆಂಗಳೂರು: ಮತ್ತೊಂದು ಬೆಳವಣಿಗೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ನಲ್ಲಿನ ಎಲ್ಲವೂ ಸರಿಯಿಲ್ಲ ಎಂಬುದು ಕಂಡುಬಂದಿದೆ. ಸಿಎಂ ಸಿದ್ದರಾಮಯ್ಯ ಮಂಗಳವಾರ ವಿಧಾನಸೌಧದ ಕಚೇರಿಯಲ್ಲಿ ಎಲ್ಲಾ ಪಕ್ಷಗಳ ಶಾಸಕರೊಂದಿಗೆ ರೂ. 50 ಕೋಟಿ ಅನುದಾನ ಕುರಿತು ಚರ್ಚೆ ನಡೆಸಲಿದ್ದಾರೆ. ಇದು ಪಕ್ಷದೊಳಗೆ ಕೆಂಗಣ್ಣಿಗೆ ಗುರಿಯಾಗಿದೆ. ವಿಶೇಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಈ ಸಭೆಯಿಂದ ಹೊರಗಿಟ್ಟಿದ್ದು, ಇಬ್ಬರು ನಾಯಕರ ನಡುವಿನ ಅಸಮಾಧಾನ ಮತ್ತಷ್ಟು ಹೆಚ್ಚಾಗಿರುವ ಅನುಮಾನ ಹುಟ್ಟಿಸಿದೆ.
ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಪಕ್ಷದ ಶಾಸಕರೊಂದಿಗೆ ಸರಣಿ ಸಭೆ ನಡೆಸಿದ ಬಳಿಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಚರ್ಚಿಸಿ ಶಾಸಕರಿಗೆ ಅನುದಾನವನ್ನು ಘೋಷಿಸಲಾಗಿತ್ತು. ಅನುದಾನ ಹಾಗೂ ಪ್ರಾದೇಶಿಕ ಅಸಮತೋಲನದಿಂದ ಅಸಮಾಧಾನಗೊಂಡಿರುವವರು ಸೇರಿದಂತೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಹೈಕಮಾಂಡ್ ಇಬ್ಬರು ನಾಯಕರಿಗೆ ಸೂಚಿಸಿತ್ತು ಎಂದು ಮೂಲಗಳು ಹೇಳುತ್ತವೆ.
ಡಿಕೆ ಶಿವಕುಮಾರ್ ನಿಯಂತ್ರಿಸುವ ಉದ್ದೇಶ: ಆದಾಗ್ಯೂ ಈ ಪ್ರಕ್ರಿಯೆಯಲ್ಲಿ ಶಿವಕುಮಾರ್ ಇಲ್ಲದೆ ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲು ನಿರ್ಧರಿಸಿದ್ದಾರೆ. ಉಪ ಮುಖ್ಯಮಂತ್ರಿಯನ್ನು ಸಭೆಯಿಂದ ಹೊರಗಿಟ್ಟಿರುವುದು ನಮ್ಮಲ್ಲಿ ಆತಂಕ ಮೂಡಿಸಿರುವುದಾಗಿ ಶಾಸಕರೊಬ್ಬರು ಹೇಳಿದ್ದಾರೆ. ಇದು ಡಿಕೆ ಶಿವಕುಮಾರ್ ಅವರನ್ನು ನಿಯಂತ್ರಿಸಲು ಮತ್ತು ಸೈಡ್ ಲೈಡ್ ಉದ್ದೇಶದಿಂದ ಕೂಡಿದೆ ಎಂದು ಪಕ್ಷದೊಳಗಿನ ನಾಯಕರೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ಈ ಹಿಂದಿನ ಅವಧಿಯಲ್ಲೂ ಈ ರೀತಿಯ ಕ್ಷೇತ್ರ ಮಟ್ಟದ ಸಭೆಗಳನ್ನು ನಡೆಸಲಾಗಿದೆ. ಸಿಎಂ ಜಿಲ್ಲಾಮಟ್ಟದ ಶಾಸಕರೊಂದಿಗೆ ಸಭ ನಡೆಸಿ, ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ಸಭೆಯಿಂದ ಡಿಕೆ ಶಿವಕುಮಾರ್ ಅವರನ್ನು ಹೊರಗಿಟ್ಟು ಸಿಎಂ ಸಿದ್ದರಾಮಯ್ಯ ಸಭೆ ನಡೆಸಿರುವುದು ಇದೇ ಮೊದಲೇನಲ್ಲಾ. ಈ ವರ್ಷದ ಆರಂಭದಲ್ಲಿ ಬಜೆಟ್ ಸಂಬಂಧಿತ ಸಭೆ ನಡೆಸಿದಾಗ ತನ್ನ ರಾಜಕೀಯ ಕಾರ್ಯದರ್ಶಿಗಳಾದ ಬಸವರಾಜ ರಾಯರೆಡ್ಡಿ, ಕೆ. ಗೋವಿಂದ ರಾಜ್, ನಾಸೀರ್ ಅಹ್ಮದ್ ಮತ್ತಿತರ ಪ್ರಮುಖ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ದರು. ಉಪ ಮುಖ್ಯಮಂತ್ರಿಯನ್ನು ಸಭೆಯಿಂದ ಹೊರಗಿಡಲಾಗಿತ್ತು.
ಈ ಅಸಮಾಧಾನದ ನಡುವೆ ಡಿಕೆ ಶಿವಕುಮಾರ್ ಇಂದು ಮತ್ತು ನಾಳೆ ಬೆಂಗಳೂರು ಅಭಿವೃದ್ಧಿ ಇಲಾಖೆ ಸೇರಿದಂತೆ ತನ್ನ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.