ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ವಾಪಸ್ಸಾಗುವ ಕುರಿತು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಿರ್ಧರಿಸುತ್ತಾರೆಂದು ಸಚಿವ ಸತೀಶ್ ಜಾರಕಿಹೊಳಿ ಅವರು ಬುಧವಾರ ಹೇಳಿದ್ದಾರೆ.
1999 ರಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ನಿರಾಕರಿಸಲಾಗಿತ್ತು ಎಂದ ಖರ್ಗೆಯವರ ಹೇಳಿಕೆ ಕುರಿತು ಸತೀಶ್ ಜಾರಕಿಹೊಳಿಯವರು ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆ ಹಿರಿಯ ನಾಯಕರಾಗಿದ್ದು, ಮುಖ್ಯಮಂತ್ರಿಯಾಗಬಾರದು ಎಂದಲ್ಲ... ಎಲ್ಲರಿಗೂ ಉನ್ನತ ಹುದ್ದೆಯನ್ನು ಅಲಂಕರಿಸುವ ಆಸೆ ಇರುತ್ತದೆ. ಕರ್ನಾಟಕದಲ್ಲಿ ಎರಡು ಅಥವಾ ಮೂರು ಶಕ್ತಿ ಕೇಂದ್ರಗಳನ್ನು ತಪ್ಪಿಸಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಲ್ಲಿಕಾರ್ಜುುನ ಖರ್ಗೆ ಅವರನ್ನು ರಾಷ್ಟ್ರೀಯ ರಾಜಕೀಯಕ್ಕೆ ಕರೆದುಕೊಂಡರು. ಇದೀಗ ಖರ್ಗೆ ಅವರನ್ನು ರಾಜ್ಯ ರಾಜಕಾರಣಕ್ಕೆ ಮರಳಿ ಕಳುಹಿಸುವ ಬಗ್ಗೆಯೂ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಹೇಳಿದರು.
ರಾಜ್ಯದಲ್ಲಿನ ಕೆಲ ಮನಸ್ತಾಪಗಳನ್ನು ತಪ್ಪಿಸಲು ಕೆಲ ನಾಯಕರನ್ನು ರಾಷ್ಟ್ರೀಮಟ್ಟಕ್ಕೆ ಸ್ಥಳಾಂತರಿಸುವ ಅಗತ್ಯವಿದ್ದು, ಇದಕ್ಕಾಗಿ ನಾವು ಸ್ವಲ್ಪ ಕಾಯಬೇಕಿದೆ. ಹೈಕಮಾಂಡ್ ಕಾರ್ಯತಂತ್ರ ರೂಪಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಕ್ಷದ ಶಾಸಕರು ಮತ್ತು ಸಚಿವರನ್ನು ಭೇಟಿ ಮಾಡಿದ್ದನ್ನು ಸಮರ್ಥಿಸಿಕೊಂಡ ಅವರು, ಸಭೆ ಕರೆಯುವ ಅಧಿಕಾರ ಅವರಿಗಿದೆ ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮೊದಲು ಪಕ್ಷದ ಶಾಸಕರನ್ನು ಭೇಟಿ ಮಾಡಿದ್ದರು, ಈಗ ಸಿಎಂ ಜಿಲ್ಲಾವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಅವರೂ ಕಾಂಗ್ರೆಸ್ ಶಾಸಕರ ಸಭೆಯನ್ನು ಕರೆಯಬಹುದು ಎಂದು ಹೇಳಿದರು.