ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆಗೆ ಅವರು ಅಮೆರಿಕಾ ಪ್ರವಾಸಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿರುವ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ನಾನು ಕೂಡ ಈ ಹಿಂದೆ ಸಚಿವನಾಗಿದ್ದಾಗ ವಿದೇಶ ಭೇಟಿಗೆ ಕೇಂದ್ರ ಸರ್ಕಾರ ಅನುಮತಿಯನ್ನು ಕೊಟ್ಟಿರಲಿಲ್ಲ. ಕೆಲ ದಿನಗಳ ಹಿಂದಷ್ಟೇ ನಾನು ಹೊರಗಡೆ ಹೋಗಬೇಕಿತ್ತು. ಕಳೆದ ವರ್ಷ ನನಗೂ ಕೂಡ ಅನುಮತಿಯನ್ನು ನೀಡಲಿಲ್ಲ. ಇದು ಕೇಂದ್ರ ಸರ್ಕಾರದ ಆಟಿಟ್ಯೂಡ್. ಇದೇ ಕಾರ್ಯಕ್ರಮಕ್ಕೆ ಬಿಜೆಪಿಯ ಸಚಿವರಿಗೆ ಅವಕಾಶ ಮಾಡಿಕೊಟ್ಟಿದ್ದರು. ಬೆಂಗಳೂರಿನ ಅನೇಕ ರಾಜಕಾರಣಿಗಳಿಗೆ ಅನುವು ಮಾಡಿಕೊಟ್ಟಿದ್ದರು. ಆದರೆ, ನನಗೆ ಮಾಡಿಕೊಟ್ಟಿರಲಿಲ್ಲ. ಇದರಿಂದ ರಾಜಕೀಯ ತಾರತಮ್ಯವಾಗುತ್ತಿರುವುದು ಸ್ಪಷ್ಟವಾಗಿದೆ. ಇದರಲ್ಲೂ ರಾಜಕೀಯ ಮಾಡುವುದು ಒಳಿತಲ್ಲ ಎಂದು ಹೇಳಿದ್ದಾರೆ.
ನಾವು ಆಡಳಿತದಲ್ಲಿ ನ್ಯಾಯಯುತವಾಗಿರಲು ಕಲಿಯಬೇಕು. ಯಾರು ಯಾರನ್ನು ತಡೆಯಲು ಸಾಧ್ಯವಿಲ್ಲ ಎಂದು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅವರದ್ದೇ ಕೇಂದ್ರ ಸಚಿವರು ಹೇಳಿದ್ದಾರೆ. ಇಡೀ ಪ್ರಪಂಚವೇ ಭಾರತವನ್ನ ಬೆಂಗಳೂರಿನ ಮೂಲಕ ನೋಡುತ್ತಿದೆ ಎಂದು ಕೇಂದ್ರ ಸಚಿವರಾದ ಪಿಯುಶ್ ಗೋಯೆಲ್, ರಾಜನಾಥ್ ಸಿಂಗ್ ಮಾತ್ರವಲ್ಲದೆ ಮಾಜಿ ಪ್ರಧಾನಿ ವಾಜಪೇಯಿ ಕೂಡ ಹೇಳಿದ್ದರು ಎಂದು ತಿಳಿಸಿದರು.
ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿಯೂ ರಾಜ್ಯ ಕಾಂಗ್ರೆಸ್ ಘಟಕವು ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದೆ.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಅಮೇರಿಕಾದಲ್ಲಿ ನಡೆಯಲಿರುವ ಎರಡು ಪ್ರಮುಖ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡದೆ ಮತ್ತೆ ಕನ್ನಡಿಗರ ಮೇಲಿನ ತನ್ನ ಮಾತ್ಸರ್ಯ ಪ್ರದರ್ಶಿಸಿದೆ ಎಂದು ಕಿಡಿಕಾರಿದೆ.
ಬೋಸ್ಟನ್ ಬಯೋ 2025 ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಡಿಸೈನ್ ಆಟೋಮೇಷನ್ ಕಾನ್ಫರೆನ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಿಯಾಂಕ್ ಖರ್ಗೆ ಅವರಿಗೆ ಅನುಮತಿ ನಿರಾಕರಿಸಿರುವುದು ಕೇಂದ್ರದ ಮೋದಿ ಸರ್ಕಾರದ ದ್ವೇಷ ರಾಜಕಾರಣದ ಪರಮಾವಧಿ ಎಂದು ವಾಗ್ದಾಳಿ ನಡೆಸಿದೆ.