ರಾಯಚೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಕೊಟ್ಟು ಶಾಸಕರ ಹಕ್ಕುಗಳನ್ನು ಕಸಿದುಕೊಂಡಿದೆ. ಹಾಗಾಗಿ ಸ್ವಪಕ್ಷೀಯ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದರು.
ದೇವದುರ್ಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಶಾಸಕರಿಗೆ ಶಾಸನಬದ್ಧ ಅನುದಾನವೂ ದೊರೆಯುತ್ತಿಲ್ಲ. ಕ್ಷೇತ್ರದ ಜನರಿಗೆ ಉತ್ತರಿಸದೆ ರಾಜ್ಯದ ಶಾಸಕರು ಅಸಹಾಯಕರಾಗಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಅಲ್ಪಸಂಖ್ಯಾತರ ಮುಸ್ಲಿಮರಿಗೆ ಶೇ 4 ಮೀಸಲಾತಿ ಕಲ್ಪಿಸಿದ್ದು ನಾನು. ಜಾತ್ಯತೀತ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಇಲ್ಲ. ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕ ದಿವಾಳಿ ಹಂತ ತಲುಪಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಗುಮಾಸ್ತರಿಗೆ ವೇತನ ನೀಡಲು ಆಗದ ಸ್ಥಿತಿಯಿದೆ. ಗ್ಯಾರಂಟಿಗಳಿಂದ ರೈತರ ಹೊಟ್ಟೆ ತುಂಬುತ್ತಿಲ್ಲ ಎಂದರು.
ರಾಜ್ಯದ ನದಿಗಳ ನೀರನ್ನು ಸಂಪೂರ್ಣವಾಗಿ ಬಳಸಲು ಅನುಕೂಲವಾಗುವಂತೆ ರೈತರಿಗೆ ಯೋಜನೆ ಕೊಟ್ಟರೆ ಮಾತ್ರ ಸುಭಿಕ್ಷೆ ಕಾಣಲು ಸಾಧ್ಯ" ಎಂದು ಇದೇ ವೇಳೆ ಮಾಜಿ ಪ್ರಧಾನಿ ಅಭಿಪ್ರಾಯಪಟ್ಟರು.
'ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ನೂರಾರು ನೀರಾವರಿ ಯೋಜನೆಗಳಿವೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಹಕಾರ ನೀಡುತ್ತಿಲ್ಲ. ನೆರೆಯ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಿಗೆ ಸಮಾನವಾಗಿ ಬೆಳೆಯುವ ಶಕ್ತಿ ನಮಗಿದೆ. ಕುಮಾರಸ್ವಾಮಿ ಅವರು ರೂಪಿಸಿದ ಪಂಚರತ್ನ ಯೋಜನೆಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವಿದೆ,'' ಎಂದು ಹೆಚ್.ಡಿ. ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ಎಂದೂ ದೊಡ್ಡ ವ್ಯಕ್ತಿ ಅಂತ ಹೇಳಿಕೊಳ್ಳಲ್ಲ. ದೇವದುರ್ಗಕ್ಕೆ ನೀರು ಕೊಟ್ಟ ವಿಷಯದಲ್ಲಿ ನಮ್ಮ ಜನ ಇನ್ನೂ ಸಂತೃಪ್ತವಾಗಿಲ್ಲ. ರಾಜ್ಯಸಭೆಯಲ್ಲಿ ನನಗೆ ಇನ್ನೂ ಒಂದು ವರ್ಷ ಅಧಿಕಾರಾವಧಿ ಇದೆ. ನಮ್ಮ ಶಾಸಕಿ ಜಿ.ಕರೆಮ್ಮ ನಾಯಕ ಕೆಲಸಗಳ ಲಿಸ್ಟ್ ಮಾಡಿ ಇಟ್ಟುಕೊಂಡಿದ್ದಾರೆ. ಈ ಪಕ್ಷ ನಮ್ಮ ಕುಟುಂಬದ ಪಕ್ಷವಲ್ಲ, ಇದು ನಿಮ್ಮ ಪಕ್ಷ. ಈ ಪಕ್ಷವನ್ನು ನೀವು ಉಳಿಸಿ ಬೆಳೆಸಬೇಕು. ನಾನು ಈ ದೇಶದಲ್ಲಿ ಆಡಳಿತ ಮಾಡುವ ವ್ಯಕ್ತಿಯನ್ನು ಟೀಕಿಸಲ್ಲ. 13 ತಿಂಗಳು ನಾನು ಬೇಡ ಅಂದ್ರೂ ಕಾಂಗ್ರೆಸ್‌ನವರು ಅಧಿಕಾರ ಕೊಟ್ಟಿದ್ದರು. ಸಿಎಂ ಆಗಿ ಕುಮಾರಸ್ವಾಮಿ 28 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ರು ಎಂದು ಹೇಳಿದರು.