ಬೆಂಗಳೂರು: ರಾಜ್ಯಕ್ಕೆ ಬರುವ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷದ ನಾಯಕರ ಜೊತೆಗೆ ಚರ್ಚಿಸುತ್ತಾರೆ. ಆದರೆ ನನಗೇನು ತಾಕೀತು ಮಾಡಲು ಸಾಧ್ಯ? ಎಂದು ಸಚಿವ ರಾಜಣ್ಣ ಅವರು ಶನಿವಾರ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಸರ್ಕಾರ, ಸಚಿವರು ಮತ್ತು ಶಾಸಕರ ಕುಂದುಕೊರತೆಗಳ ಆಲಿಸಲು ರಾಜ್ಯಕ್ಕೆ ಬರುತ್ತಿದ್ದಾರೆ. ಅದರಿಂದ ನನಗೆ ಯಾವುದೇ ಸಮಸ್ಯೆಯಿಲ್ಲ. ರಾಜ್ಯಕ್ಕೆ ಬರುವ ಸುರ್ಜೆವಾಲಾ ಪಕ್ಷದ ನಾಯಕರೊಂದಿಗೆ ಚರ್ಚಿಸುತ್ತಾರೆ. ಆದರೆ, ನನಗೆನು ತಾಕೀತು ಮಾಡಲು ಸಾಧ್ಯ? ಎಂದು ಹೇಳಿದರು.
ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಡಿ.ಕೆ.ಶಿವಕುಮಾರ್ ಅವರನ್ನು ಪ್ರಧಾನಿ, ಇಲ್ಲವೆ ಮುಖ್ಯಮಂತ್ರಿಯನ್ನೇ ಮಾಡಲಿ. ನನ್ನದೇನೂ ಅಭ್ಯಂತರವಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಸತೀಶ್ ಜಾರಕಿಹೊಳಿ ಅಧ್ಯಕ್ಷರಾಗಬಹುದು ಅಂದುಕೊಂಡಿದ್ದೇನೆ. ಎಲ್ಲವನ್ನೂ ಕಾಲವೇ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.
ನನ್ನ ಪ್ರಕಾರ ಕಾಂಗ್ರೆಸ್‌ನಲ್ಲಿ ಮೂರು ಪವರ್ ಸೆಂಟರ್ ಇದೆ. ಹೈಕಮಾಂಡ್ , ಕೆಪಿಸಿಸಿ ಅಧ್ಯಕ್ಷ, ಹಾಗೂ ಸಿಎಂ ಮೂವರು ಪವರ್ ಸೆಂಟರ್ ಇದೆ. ಸಿಎಂ ಬದಲಾವಣೆ ಎನ್ನುವುದನ್ನು ಕಾಲ ನಿರ್ಣಯ ಮಾಡಲಿದೆ. ಕೆಲ ಮಾಧ್ಯಮದವರು ರಾಜಣ್ಣನವರು ಸಿದ್ದರಾಮಯ್ಯನವರಿಂದ ದೂರವಾಗಿದ್ದಾರೆಂದು ಸುದ್ದಿ ಮಾಡಿದ್ದಾರೆ. ನಾನು ಯಾವತ್ತೂ ಸಿಎಂ ಸಿದ್ದರಾಮಯ್ಯರ ಜೊತೆ ಇದ್ದೇನೆ. ಇವತ್ತೂ, ನಾಳೆ, ಯಾವತ್ತೂ ನಾನು ಸಿದ್ದರಾಮಯ್ಯ ಬಣ. ಸಿದ್ಧರಾಮಯ್ಯ ಇರುವುದರಿಂದ ನಾನು ರಾಜಕಾರಣ ಮಾಡುತ್ತಿರುವುದು. ಅವರಿಲ್ಲದಿದ್ದರೇ ರಾಜಕೀಯ ಬಿಡುತ್ತೇನೆಂದು ಹೇಳಿದರು.
ಇದೇ ವೇಳೆ ಆಗಸ್ಟ್- ಸೆಪ್ಟೆಂಬರ್ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯಿಸಿ, ಕ್ರಾಂತಿ ಎಂದರೆ ಹಸಿರು ಕ್ರಾಂತಿಯೂ ಆಗಬಹುದು ಅಲ್ಲವೇ? ಬರೀ ಕಾಂಗ್ರೆಸ್‌ನಲ್ಲಿ ಮಾತ್ರ ಕ್ರಾಂತಿ ಎಂದು ಯಾಕೆ ಭಾವಿಸುತ್ತೀರಾ? ಬಿಜೆಪಿಯಲ್ಲೂ ಕ್ರಾಂತಿ ಆಗುತ್ತಿದೆ. ಕೇಂದ್ರದಲ್ಲೂ ಕ್ರಾಂತಿ ಆಗಬಹುದು. ಬಿಜೆಪಿಯಲ್ಲೂ 75 ವರ್ಷದ ನಂತರ ಹುದ್ದೆಯಿಂದ ಕೆಳಗೆ ಇಳಿಬೇಕು. 75 ವರ್ಷ ಆದ ಕಾರಣ ಅಡ್ವಾಣಿಯನ್ನು ಪ್ರಧಾನಿ ಹುದ್ದೆಯಿಂದ ತಪ್ಪಿಸಿದರು, ಅಲ್ಲೂ ಕ್ರಾಂತಿ ಆಗಬಹುದು. ರಾಜಕಾರಣ ಬದಲಾವಣೆಯ ನಿಯಮ ಹೊಂದಿದೆ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು.
ಬಿಜೆಪಿಯಲ್ಲೂ ಕ್ರಾಂತಿ ಆಗುತ್ತಿದೆ. ಕ್ರೇಂದ್ರ ಸರ್ಕಾರದಲ್ಲೂ ಸಹ ಬದಲಾವಣೆ ನಿರೀಕ್ಷೆ ಮಾಡಬಹುದು. ಆರ್‌ಎಸ್‌ಎಸ್‌ನವರ ಸೆಟ್ ಆಫ್ ಪ್ರಿನ್ಸಿಪಲ್‌ನಂತೆ 75 ವರ್ಷದ ನಂತರ ಯಾವುದೇ ಹುದ್ದೆಯಲ್ಲಿ ಇರಲಿಕ್ಕಿಲ್ಲ. ಹಾಗಾಗಿಯೇ ಅಡ್ವಾಣಿಗೆ ಪ್ರಧಾನಿ ಸ್ಥಾನ ಸಿಕ್ಕಿಲ್ಲ. ಈಗ ಅದೇ ಪ್ರಿನ್ಸಿಪಲ್ ಮೋದಿಯವರಿಗೂ ಅನ್ವಯಿಸುತ್ತದೆ. ಅದು ಒಂದು ಬದಲಾವಣೆ ಕ್ರಾಂತಿ ಅಲ್ಲವೇ? ಅದನ್ನು ಯಾಕೆ ನೀವು ಊಹೆ ಮಾಡಲ್ಲ? ಬರೀ ಕರ್ನಾಟಕದ ಕಾಂಗ್ರೆಸ್ ಪಾರ್ಟಿಯನ್ನು ಯಾಕೆ ಊಹೆ ಮಾಡುತ್ತೀರಾ? ಸಿಎಂ ಬದಲಾಗುತ್ತಾರೆ, ಸಂಪುಟ ವಿಸ್ತರಣೆ, ಅಧ್ಯಕ್ಷ ಬದಲಾವಣೆ, ಬರೀ ಇದರ ಬಗ್ಗೆ ಯಾಕೆ ಚರ್ಚೆ ಮಾಡುತ್ತೀರಾ? ರಾಜಕೀಯ ನಿಂತ ನೀರಲ್ಲ, ಅದು ಬದಲಾಗುತ್ತಿರುತ್ತದೆ. ರಾಜಿಕೀಯ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುತ್ತದೆ ಎಂದರು.
ಮಧುಗಿರಿ ಜಿಲ್ಲೆ ವಿಚಾರವಾಗಿ ಮಾತನಾಡಿ, ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುತ್ತೇನೆ. ನನ್ನ ಅವಧಿಯಲ್ಲೇ ಈ ಕೆಲಸ ಆಗುತ್ತದೆ ಎಂದು ಹೇಳಿದರು.
ತುಮಕೂರು ಜಿಲ್ಲೆ ವಿಸ್ತೀರ್ಣದಲ್ಲಿ ದೊಡ್ಡದಿದ್ದು, ಮೂರು ಜಿಲ್ಲೆಯಾಗಿಯೂ ಮಾಡಬಹುದು. ಧಾರವಾಡವನ್ನು ಮೂರು ಜಿಲ್ಲೆ ಮಾಡಿದಂತೆ ತುಮಕೂರಿನ ಜೊತೆಗೆ ಮಧುಗಿರಿ, ತಿಪಟೂರು ಜಿಲ್ಲೆಯನ್ನಾಗಿ ಮಾಡುವ ಅವಕಾಶಗಳಿವೆ ಎಂದರು.