ಬೆಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಬಲಿಷ್ಠ ಸರ್ಕಾರವಿದ್ದು, ಯಾವ ಏಕನಾಥ್ ಶಿಂಧೆ ಸರ್ಕಾರವೂ ಬರುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಅವರು ಶನಿವಾರ ಹೇಳಿದರು.
ಕರ್ನಾಟಕದಲ್ಲಿ ಏಕನಾಥ್ ಶಿಂಧೆ ಮಾದರಿಯಲ್ಲಿ ಸರ್ಕಾರ ರಚನೆಯಾಗಲಿದೆ ಎಂದ ಪ್ರತಿಪಕ್ಷಗಳ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ. ಶಿವಕುಮಾರ್ ಇಶ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗಿದ್ದರು. ಇದರ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದಕ್ಕೆ ರಾಜಕೀಯ ಮಹತ್ವ ನೀಡಬಾರದು ಎಂದು ಹೇಳಿದರು.
ಬಿಜೆಪಿ ನಾಯಕರು ರಾಜಕೀಯ ಕಾರಣಗಳಿಗಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವುಗಳಿಗೆ ಪ್ರಾಮುಖ್ಯತೆ ನೀಡಬಾರದು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವ ಬಲಗೊಳ್ಳುತ್ತಿದ್ದು, ಶಿಂಧೆ ಮಾದರಿ ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.
ಎಸ್ಇಪಿ, ಟಿಎಸ್'ಪಿ ಹಣ ದುರುಪಯೋಗವಾಗುತ್ತಿದೆ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿ, ದಲಿತರ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. 17 ರಿಂದ 18 ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಿದಲ್ಲಿದೆ. ದೇಶದಲ್ಲಿ ದಲಿತರು ಶೇ.24 ಮಂದಿ ಇದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬೊಮ್ಮಾಯಿ ಸಿಎಂ ಆಗಿದ್ದರು. ಆಗ 10 ಸಾವಿರ ಕೋಟಿ ದಲಿತರ ಹಣ ದುರ್ಬಳಕೆ ಆಯಿತು. ಆದರೆ, ಯಾಕೆ ಯಾರು ಅದನ್ನ ಪ್ರಶ್ನೆ ಮಾಡಿಲ್ಲ? ಈಗ ಪರಿಶಿಷ್ಟ ಜನ ಪರಿಶಿಷ್ಟ ಜನಾಂಗದ ಹಣ ದುರ್ಬಳಕೆ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ಆದರೆ, ನಾವು ಯಾವುದೇ ಹಣ ದುರ್ಬಳಕೆ ಮಾಡುತ್ತಿಲ್ಲ. ಕಾನೂನು ಪ್ರಕಾರವೇ ಹಣ ಬಳಕೆ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ಗ್ರೇಟರ್ ಮೈಸೂರು ಬಗ್ಗೆ ಪ್ರತಿಕ್ರಿಯಿಸಿ, ಮೈಸೂರು ನಗರ ನಿಗಮವನ್ನು ಬೃಹತ್ ಮೈಸೂರು ನಗರ ನಿಗಮವಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಸರ್ಕಾರ ಶೀಘ್ರದಲ್ಲೇ ನಿರ್ಧರಿಸಲಿದೆ ಎಂದು ಹೇಳಿದರು.
ದೇವರಾಜ ಮಾರುಕಟ್ಟೆ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿ ಶಿಥಿಲಗೊಂಡ ಕಟ್ಟಡದಿಂದ ಅವರನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಗಳಿಗೆ ಈಗಾಗಲೇ ಬೇಡಿಕೆಗಳ ಪಟ್ಟಿಯನ್ನು ನೀಡಲಾಗಿದ್ದು, ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಮೈಸೂರು ನಗರ ಸೇರಿದಂತೆ ಅಭಿವೃದ್ಧಿಯತ್ತ ಗಮನ ಹರಿಸಲಿದ್ದಾರೆಂದು ಹೇಳಿದರು.