ಬೆಂಗಳೂರು: ರಾಜ್ಯಪಾಲರೊಂದಿಗಿನ ಸಂಘರ್ಷ ನಿಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಂಗಳವಾರ ಸಲಹೆ ನೀಡಿದ್ದಾರೆ.
ಮಂಗಳವಾರ ರಾಜ್ಯಪಾಲರ ಭಾಷಣ ಮೇಲೆ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಎರಡು ಮಸೂದೆಗಳನ್ನು ಅಂಗೀಕರಿಸಲು ನಿರಾಕರಿಸಿ ವಾಪಸ್ ಕಳುಹಿಸಿದ ನಂತರ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಶುರುವಾಗಿದೆ. ಜನರ ಹಿತದೃಷ್ಟಿಯಿಂದ ಸ್ಪಷ್ಟೀಕರಣ ಪಡೆಯುವುದು ಅವರ ಕರ್ತವ್ಯ. ಆದರೆ, ಸರ್ಕಾರ ಕೋಪಗೊಂದು ಅವರ ವಿರುದ್ಧ ಸಂಘರ್ಷಕ್ಕಿಳಿದಿದೆ. ರಾಜ್ಯಪಾಲರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಲು ಯತ್ನಿಸುತ್ತಿದೆ. ಈ ಮೂಲಕ ಸಂವಿಧಾನಕ್ಕೆ ಅಗೌರವ ತರುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರ ಭಾಷಣವು ರಾಜ್ಯದಲ್ಲಿ ಎಲ್ಲವೂ ಚೆನ್ನಾಗಿದೆ ಎಂಬ ಭಾವನೆಯನ್ನು ನೀಡಿತು, ಆದರೆ ಅದು ವಾಸ್ತವಕ್ಕೆ ಹೊಂದಿಕೆಯಾಗಲಿಲ್ಲ. ರಾಜ್ಯದಲ್ಲಿ ಇಷ್ಟೊಂದು ಕಲ್ಯಾಣ ಕಾರ್ಯಕ್ರಮಗಳಿದ್ದರೆ, ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳದಿಂದಾಗಿ ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ರೀತಿ ಆಗಿದ್ದು ಏಕೆ? ಅನೇಕ ಯುವಕರು ಆನ್‌ಲೈನ್ ಜೂಜಾಟಕ್ಕೆ ಬಲಿಯಾಗುತ್ತಿರುವುದು ಏಕೆ ಹೆಚ್ಚಿನ ಸಂಖ್ಯೆಯ ಶಿಕ್ಷಕರ ಹುದ್ದೆಗಳೇಕೆ ಖಾಲಿ ಇವೆ? ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರ ಏಕೆ ಬಯಸುತ್ತಿದೆ ಎಂದು ಪ್ರಶ್ನಿಸಿದರು.
ಇದಲ್ಲದೆ, ರಾಜ್ಯ ರಾಜಧಾನಿಯಲ್ಲಿನ ಮೂಲಸೌಕರ್ಯಗಳು ಕುಸಿಯುತ್ತಿರುವ ಬಗ್ಗೆಯೂ ಛಲವಾದಿ ನಾರಾಯಣಸ್ವಾಮಿಯವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನವದೆಹಲಿಯ ಮಾದರಿಯಲ್ಲಿ 'ನವ ಬೆಂಗಳೂರು' ಅನ್ನು ಅಭಿವೃದ್ಧಿಪಡಿಸಬೇಕೆಂದು ಸಲಹೆ ನೀಡಿದರು. ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಅಸ್ತಿತ್ವದಲ್ಲಿರುವ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳನ್ನು ಸುಧಾರಿಸಿ ಅದನ್ನು ಬಳಸಿಕೊಳ್ಳುವಂತೆ ಸೂಚಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಮತ್ತು ಯಾವುದೇ ಅಭಿವೃದ್ಧಿ ಇಲ್ಲ ಎಂಬ ಅಭಿಪ್ರಾಯವಿದೆ. ಈ ಗ್ರಹಿಕೆಯನ್ನು ಬದಲಾಯಿಸಲು ಸರ್ಕಾರ ಕೆಲಸ ಮಾಡಬೇಕು ಎಂದು ಹೇಳಿದರು