ಮೈಸೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ, ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ.ಶಿವಕುಮಾರ್ ಅವರೇ ಮುಂದುವರಿಯಲಿದ್ದಾರೆಂದು ಮಾಜಿ ಸಚಿವ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಅವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹುದ್ದೆ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ನನಗೂ ಕೂಡ ಸಿಎಂ ಹುದ್ದೆ ಮೇಲೆ ಆಸೆ ಇದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಸಂಬಂಧ ಬದಲಾವಣೆ ಮಾಡೋವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಆ ಸ್ಥಾನದಲ್ಲಿಇರುವವರೆಗೆ ಅವರಿಗೆ ಗೌರವ ನೀಡಬೇಕು. ಬದಲಾವಣೆ ಆಗುತ್ತದೆ, ಆಗಲ್ಲ ಆ ಚರ್ಚೆ ಬಗ್ಗೆ ಏನು ಹೇಳಲ್ಲ. ನಮ್ಮ ವರಿಷ್ಠರು ಅಂತಿಮ ತೀರ್ಮಾನ ಮಾಡುತ್ತಾರೆಂದು ಹೇಳಿದರು.
ಅವಕಾಶ ಯಾವಾಗ, ಯಾರು ಕೊಡುತ್ತಾರೆ ಆವಾಗ ನಿರ್ವಹಣೆ ಮಾಡುತ್ತೇನೆ. ಸಿಎಂ ಅನ್ನೋದು ಕೇವಲ ಒಂದು ಹುದ್ದೆ ಅಲ್ಲ. ರಾಜ್ಯಕ್ಕೆ ದಿಕ್ಕು ದೆಸೆ ತೋರಿಸುವ ಹುದ್ದೆ. ಹೀಗಾಗಿ ಸದ್ಯಕ್ಕೆ ಆ ಬಗ್ಗೆ ಚರ್ಚೆ ಮಾಡಲ್ಲ, ನನಗೆ ಸಚಿವ ಸ್ಥಾನದ ಬಗ್ಗೆ ಸಾಕಷ್ಟು ಆಸೆ ಇದೆ. ಆದರೆ, ಯಾವುದು ಕೂಡ ಖಾಲಿ ಇಲ್ಲ. ನನಗೆ ಸಚಿವ ಸ್ಥಾನ ನೀಡಿದರೆ ಯಶಸ್ವಿಯಾಗಿ ನಿಭಾಯಿಸುವೆ ಎಂದು ತಿಳಿಸಿದರು.
ಯಾರಿಗೆ ಯಾವುದು ಶಾಶ್ವತವಲ್ಲ. ಯಾರಿಗೆ ಯಾವ ಹುದ್ದೆಯೂ ಶಾಶ್ವತವಲ್ಲ. ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷವನ್ನು ಸಂಕಷ್ಟದ ಸಮಯದಲ್ಲಿ ಮುನ್ನಡೆಸಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾನಿಲ್ಲ. ಕಾರ್ಯಕರ್ತರ ರೀತಿ ಕೆಲಸ ಮಾಡುತ್ತೇನೆ. ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವ ಸಾಮರ್ಥ್ಯ ಹೊಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನಲ್ಲಿರುವವರು ಸೇರಿದಂತೆ ಎಲ್ಲರಿಗೂ ಕರ್ನಾಟಕದಲ್ಲಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಅವರ ಕಠಿಣ ಪರಿಶ್ರಮ ಮತ್ತು ತಂತ್ರದ ಬಗ್ಗೆ ತಿಳಿದಿದ್ದಾರೆ ಎಂದರು.
ಹಲಾಲ್ ಬಜೆಟ್ ಎಂಬ ಬಿಜೆಪಿ ಟೀಕೆ ಕುರಿತು ಪ್ರತಿಕ್ರಿಯಿಸಿ, ಶೇ.1 ರಷ್ಟು ಮಾತ್ರ ಬಜೆಟ್‌ನಲ್ಲಿ ಮುಸ್ಲಿಮರಿಗೆ ಕೊಟ್ಟಿದ್ದಾರೆ. ಇದನ್ನು ಹಲಾಲ್ ಬಜೆಟ್ ಅಂದರೆ ಏನು? ಬಿಜೆಪಿಯವರು ಆ ರೀತಿ ಹೇಳಿದರೆ ಇನ್ಮುಂದೆ ಹಲಾಲ್ ಬಜೆಟ್ ಇರಲಿ ಅಂತ ನಾನು ಹೇಳುತ್ತೇನೆ ಎಂದು ಹೇಳಿದರು.
ಪ್ರತಾಪ್ ಸಿಂಹ ಕುರಿತು ಮಾತನಾಡಿ, ಅವರು ನನ್ನ ಸ್ನೇಹಿತ, ನನ್ನ ಅವನ ನಡುವೆ ಒಳ್ಳೆಯ ಸ್ನೇಹವಿದೆ. ಆದರೆ, ಆತನ ಮಾತು, ನಾಲಿಗೆ ಸ್ವಲ್ಪ ಸರಿಯಿಲ್ಲ. ಅವನ ಮಾತಿನಿಂದ ಹಲವರಿಗೆ ನೋವಾಗಿದೆ. ಸಭ್ಯತೆ ಮೀರಿ ಆತ ನಡೆದುಕೊಳ್ಳಬಾರದು. ಅದು ಕಂಟ್ರೋಲ್ ಮಾಡಿಕೊಳ್ಳಬೇಕು. ಹಜ್‌ಗೆ ನಾವು ದೇವಸ್ಥಾನದ ದುಡ್ಡು ಬಳಸಿಲ್ಲ. ಬೇಕಾದರೆ ಆರ್‌ಟಿಐ ಅರ್ಜಿ ಹಾಕಿ ಮಾಹಿತಿ ತೆಗೆದುಕೊಳ್ಳಬಹುದು ಎಂದರು.