ಬೆಂಗಳೂರು: ಡಾ. ಬಿಆರ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ಸಾ ಅಥವಾ ಸಾವರ್ಕರಾ? ಎಂಬ ವಿಚಾರ ಸೋಮವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಕೋಲಾಹಲ, ಮಾತಿನ ಸಮರಕ್ಕೆ ಕಾರಣವಾಯಿತು.
ಇಂದು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಸ್ಇಪಿ, ಟಿಎಸ್ ಪಿ ಕಾನೂನು ಜಾರಿಗೆ ತಂದ ವಿಚಾರವನ್ನು ಪ್ರಸ್ತಾಪಿಸಿದಾಗ ಬಿಜೆಪಿ ಸದಸ್ಯರು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಅರವಿಂದ ಬೆಲ್ಲದ, 'ಮಂತ್ರಿ ಮಂಡಲದಿಂದ ಹೊರ ಹಾಕಿದ್ದು ಯಾರು? ಸೋಲಿಸಿದ್ದು ಯಾರು? ಸಮಾಧಿಗೆ ಜಾಗ ಕೊಡದಿದ್ದು ಯಾರು?' ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರಿಯಾಂಕ್ ಖರ್ಗೆ,'1952 ರಲ್ಲಿ ಅಂಬೇಡ್ಕರ್ ಬರೆದ ಪತ್ರದಲ್ಲಿ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು ದಾಮೋದರ್ ಸಾವರ್ಕರ್ ಎಂದು ಬರೆದಿದ್ದಾರೆ ಎಂದರು. ಅಲ್ಲದೆ ಪತ್ರ ಪ್ರದರ್ಶನ ಮಾಡಿದರೆ ರಾಜೀನಾಮೆ ಕೊಡುತ್ತೀರಾ?' ಎಂದು ಸವಾಲು ಹಾಕಿದರು.
ಪತ್ರದಲ್ಲಿ ಅಂಬೇಡ್ಕರ್ ಕಾಂಗ್ರೆಸ್ ಹೆಸರು ಉಲ್ಲೇಖ ಮಾಡಿಲ್ಲ, ಬದಲಾಗಿ ಸಾವರ್ಕರ್ ಹೆಸರು ಬರೆದಿದ್ದಾರೆ. ಇದನ್ನು ಸಾಬೀತು ಮಾಡುತ್ತೇವೆ ಎಂದರು. ಇದು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಮಾತಿನ ಜಟಾಪಟಿಗೆ ಕಾರಣವಾಯ್ತು.
ಸವಾಲು, ಆರೋಪ, ಪ್ರತ್ಯಾರೋಪ ಹಾಗೂ ಏರು ಧ್ವನಿಯ ಮಾತಿನ ನಡುವೆ ಕಾಂಗ್ರೆಸ್ ಬಿಜೆಪಿ ಸದಸ್ಯರು ಪರಸ್ಪರ ಘೋಷಣೆ ಕೂಗಿದರು. ಈ ನಡುವೆ ಪ್ರಿಯಾಂಕ್ ಖರ್ಗೆ ಅಂಬೇಡ್ಕರ್ ಬರೆದಿರುವ ಪತ್ರವನ್ನು ಸದನದಲ್ಲಿ ಓದಿದರು.
ಅಲ್ಲದೆ ಬಿಜೆಪಿ ಸದಸ್ಯರ ಆರೋಪದಿಂದ ಕೆರಳಿದ ಪ್ರಿಯಾಂಕ್ ಖರ್ಗೆ, 'ಏನಂದುಕೊಂಡಿದ್ದೀರಾ, ಇದು ಸದನ. ಬಾಯಿಗೆ ಬಂದ ಹಾಗೆ ಮಾತನಾಡಲು ಇದು ಆರ್ ಎಸ್ ಎಸ್ ಕಚೇರಿ ಅಲ್ಲ. ಯಾರಿಗೆ ಹೆದರಿಸುತ್ತಿದ್ದೀರಾ? ನೋಡಿದ್ದೀನಿ ನಿಮ್ಮಂತ ಆರ್ ಎಸ್ ಎಸ್ ಜನರನ್ನು. ಸದನದಲ್ಲಿ ನಿಮಗೆಷ್ಟು ಅಧಿಕಾರ ಇದ್ಯಾ ನನಗೂ ಅಷ್ಟೇ ಇದೆ' ಎಂದು ವಾಗ್ದಾಳಿ ನಡೆಸಿದರು.