ಬೆಂಗಳೂರು: ರಾಜ್ಯ ಸರ್ಕಾರ ಮುಸ್ಲಿಮರನ್ನು ಪ್ರತ್ಯೇಕವಾಗಿರಿಸುವ "ಹಲಾಲ್ ಬಜೆಟ್" ಮಂಡಿಸಿದೆ ಎಂದು ಬಿಜೆಪಿ ಮಂಗಳವಾರ ಟೀಕಿಸಿದೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ನಾಯಕರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಅವರು ಮಾತನಾಡಿ, ರಾಜ್ಯವು 1.16 ಲಕ್ಷ ಕೋಟಿ ರೂ. ಸಾಲ ಪಡೆದಿದ್ದು, ಸರ್ಕಾರದ ಬಜೆಟ್ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತದೆ ಎಂದು ಹೇಳಿದರು.
ಈ ಬಜೆಟ್‌ನಲ್ಲಿ ಜನರನ್ನು ಒಂದು ದಿನದ ಭ್ರಮೆಗೆ ಒಳಪಡಿಸುವ ತಂತ್ರಗಾರಿಕೆ ಇದೆ. ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುವ ಕೆಲಸ ಮಾಡಲಾಗಿದೆ. 2022-23ನೇ ಸಾಲಿನಲ್ಲಿ 1269.82 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಗಿತ್ತು. ಆಗ ಬಜೆಟ್ 2.74 ಲಕ್ಷ ಕೋಟಿ ಗಾತ್ರ ಹೊಂದಿತ್ತು. 44,549 ಕೋಟಿ ರೂ. ವಾರ್ಷಿಕ ಸಾಲ ಇತ್ತು. ಬಂಡವಾಳ ವೆಚ್ಚ 60,559 ಕೋಟಿ ರೂ.ಗಳಾಗಿತ್ತು. ಆದರೆ, ಈ ಸಾಲಿನ ಬಜೆಟ್‌ನಲ್ಲಿ ವಾರ್ಷಿಕ ಸಾಲ 1.16 ಲಕ್ಷ ಕೋಟಿ ರೂ. ದಾಟಿದೆ. 3 ವರ್ಷದಲ್ಲಿ ಶೇ.160 ರಷ್ಟು ಸಾಲದ ಪ್ರಮಾಣ ಏರಿಕೆಯಾಗಿದೆ. ಬಂಡವಾಳ ವೆಚ್ಚ 71,336 ಕೋಟಿ ರೂ. ಎಂದು ಹೇಳಲಾಗಿದೆ. ಸಾಲ ಶೇ.160 ರಷ್ಟು ಜಾಸ್ತಿಯಾದರೆ, ಬಂಡವಾಳ ವೆಚ್ಚದ ಪ್ರಮಾಣ ಬರೀ ಶೇ.17.7 ರಷ್ಟು ಏರಿಕೆಯಾಗಿದೆ ಎಂದು ಹರಿಹಾಯ್ದರು.
ತೆರಿಗೆ ಸಂಗ್ರಹಕ್ಕೆ ಸರಿಸಮನಾಗಿ ಬಂಡವಾಳ ವೆಚ್ಚ ಏರಿಕೆಯಾಗುತ್ತಿಲ್ಲ. ಸಾಲ ಮಾಡಿ ವೆಚ್ಚ ಭರಿಸುವ ಸ್ಥಿತಿಗೆ ಸರ್ಕಾರ ಹೋಗುತ್ತಿದೆ. 2022-23ನೇ ಸಾಲಿನಲ್ಲಿ 5,22,847 ಕೋಟಿ ರೂ. ಇದ್ದ ಸಾಲ ಈಗ 7,64,655 ಕೋಟಿ ರೂ.ಗೆ ಏರಿಕೆಯಾಗಿದೆ. ಜತೆಗೆ 13,748 ಕೋಟಿ ಹೊರಗಿನ ಸಾಲವೂ ಇದೆ. ಜತೆಗೆ ರಾಜ್ಯದ ಬದ್ಧತಾ ವೆಚ್ಚ 2022-23ರಲ್ಲಿ 1,05,000 ಕೋಟಿ ರೂ.ಗಳಿಂದ ಈ ವರ್ಷ 2,31,000 ಕೋಟಿ ರೂ.ಗೆ ಹೆಚ್ಚಿದೆ. ರಾಜಸ್ವ ಸಂಗ್ರಹಕ್ಕೆ ಸರ್ಕಾರ ಜನರ ಮೇಲೆ ತೆರಿಗೆ ಬರೆ ಎಳೆಯುತ್ತಿದೆ. ಇದನ್ನು ಸುಲಿಗೆಕೋರ ಸರ್ಕಾರ ಎನ್ನಬೇಕಾ ಎಂದು ಪ್ರಶ್ನಿಸಿದರು.
ಇದು ನುಡಿದಂತೆ ನಡೆದ ಸರ್ಕಾರ ಅಲ್ಲ, ನುಡಿದಂತೆ ನಡೆಯದ ಸರ್ಕಾರ. ಬಜೆಟ್ ಅಂಕಿ-ಅಂಶಗಲು ಅವಾಸ್ತವಿಕವಾಗಿವೆ. ಸಾಲದ ಬಡ್ಡಿಯೇ 45,600 ಕೋಟಿ ರೂ.ಗಳಾಗಿದೆ. ಈ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜಾಣತನ, ಆರ್ಥಿಕ ಶಿಸ್ತು ನೋಡಲು ಸಾಧ್ಯವಿಲ್ಲ. ವಾಣಿಜ್ಯ ತೆರಿಗೆ ಅಧಿಕಾರಿಗಳಲ್ಲಿ ಪೇಮೆಂಟ್ ಸೀಟೇ ಜಾಸ್ತಿ ಇದೆ. ಹೀಗಾಗಿ ತೆರಿಗೆ ಸಂಗ್ರಹದ ಗುರಿ ತಲುಪಲು ಸಾಧ್ಯವಿಲ್ಲ. 28 ಸಾವಿರ ಕೋಟಿ ರೂ. ಹೆಚ್ಚು ತೆರಿಗೆ ಗುರಿ ಹೊಂದಲಾಗಿದೆ. ಇದು ಸಾಧ್ಯವೆ? ರಾಜ್ಯದ ಜನರನ್ನು ಸಾಲದ ಸುಳಿಗೆ ದೂಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಅಲ್ಲದೆ, ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲು 100 ಕೋಟಿ ರೂ. ಹಂಚಿಕೆ ಮಾಡಿರುವುದನ್ನು ಟೀಕಿಸಿದರು.
ರಾಜ್ಯವು 'ಸರ್ವ ಜನಾಂಗದ ಶಾಂತಿಯ ತೋಟ' (ಎಲ್ಲಾ ಸಮುದಾಯಗಳ ಉದ್ಯಾನ) ಆಗಬೇಕೆಂದು ಬಯಸುತ್ತಿದೆ. ಈ ರೀತಿ ಬಯಸಿದಾಗ ಧರ್ಮ ಮತ್ತು ಜಾತಿಯನ್ನು ಆಧರಿಸಿದ ಶಾಲೆಗಳು ಏಕೆ ಇರಬೇಕು. ಮಕ್ಕಳು ವೈವಿಧ್ಯಮಯ ವಾತಾವರಣದಲ್ಲಿ ಅಧ್ಯಯನ ಮಾಡಬೇಕು. ಆದರೆ, ಪ್ರತ್ಯೇಕ ಶಾಲೆಯು ಮುಸ್ಲಿಮರನ್ನು ಮತ್ತಷ್ಟು ಪ್ರತ್ಯೇಕಿಸುತ್ತದೆ ಎಂದು ಹೇಳಿದರು.
ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಅವರು ಮಾತನಾಡಿ, ಮುಸ್ಲಿಮರನ್ನು ಪ್ರತ್ಯೇಕವಾಗಿ ಇರಿಸುವ "ಹಲಾಲ್ ಬಜೆಟ್" ಇದು ಎಂದು ಟೀಕಿಸಿದರು.
ಬಿರಿಯಾನಿ ತಿನ್ನಿಸಲು ನೀವು 1.16 ಲಕ್ಷ ಕೋಟಿ ರೂ.ಗಳ ಬೃಹತ್ ಸಾಲವನ್ನು ಪಡೆಯುತ್ತಿದ್ದೀರಿ. ಇದು ಬಜೆಟ್ ಹಲಾಲ್ ... ಇದರಿಂದ ಮುಸ್ಲಿಮರಿಗೆ ಪ್ರಯೋಜನವಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ತನ್ನ ಖರ್ಚಿಗೆ ಸಾಲ ಮಾಡಿದೆ. ಅಬಕಾರಿಯಿಂದ 40,000 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಮತ್ತು 36,000 ಕೋಟಿ ರೂ. ಮದ್ಯದಿಂದ ಬರುತ್ತದೆ, ಮದ್ಯವನ್ನು ಬಡವರು ಹೆಚ್ಚು ಕುಡಿಯುವುದುಂಟು. ಇದರಿಂದ ಕರ್ನಾಟಕ್ಕೆ ಹಾನಿಯಾಗುತ್ತದೆ ಎಂದು ಕಿಡಿಕಾರಿದರು.
ಅಬಕಾರಿ ಆದಾಯವನ್ನು ಅವಲಂಬಿಸುವುದು ಒಳ್ಳೆಯದಲ್ಲ ಅರವಿಂದ್ ಬೆಲ್ಲದ್ ಅವರ ಹೇಳಿಕೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಖಂಡಿಸಿದರು. ಇದೇ ವೇಳೆ ಮದ್ಯ ನಿಷೇಧಿಸಲು ನಿರ್ಣಯವನ್ನು ತರುವಂತೆ ಬಿಜೆಪಿಗೆ ಸವಾಲು ಹಾಕಿದರು.
ಮದ್ಯದ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಕೇಂದ್ರದ ಮೇಲೆ ಬಿಜೆಪಿ ಒತ್ತಡ ಹೇರಬೇಕೆಂದು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಸಲಹೆ ನೀಡಿದರು.
ಬಿಹಾರ ಸರ್ಕಾರ ಮದ್ಯ ನಿಷೇಧಿಸಿದೆ, ಅಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಯನ ಮಾಡಲು ತಂಡವನ್ನು ಕಳುಹಿಸಿದ್ದರು. ಆದರೆ, ಅದು ಕೇವಲ ಶೇ. 70 ರಷ್ಟು ಯಶಸ್ವಿಯಾಗಿರುವುದು ತಿಳಿದುಬಂದಿತ್ತು. ಮದ್ಯದ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಲು ಸಾಧ್ಯವಿಲ್ಲ. ಏಕೆಂದರೆ ಅದು ನಕಲಿ ಮದ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್‌ನ ಶಿವಲಿಂಗೇಗೌಡ ಮಾತನಾಡಿ, ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಕೇಂದ್ರದ ತೆರಿಗೆ ಬಾಬ್ತಿನಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತ ಆದರೆ ಅದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ. ಜಿಎಸ್‌ಟಿಯಲ್ಲಿ ಪಾಲು ಕೇಳುವ ಕೇಂದ್ರ ಸರ್ಕಾರ, ಆದಾಯ ತೆರಿಗೆಯಲ್ಲೂ ನಮಗೆ ಪಾಲು ಕೊಡಬೇಕು. ಸೆಸ್, ಸರ್ಚಾರ್ಜ್ ಇಟ್ಟುಕೊಂಡಿಲ್ಲವೆ ಎಂದು ಕೇಳಿದರು.
ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಪ್ರಮಾಣ ಶೇ.3 ರ ಬದಲು ಶೇ.4 ರಷ್ಟಿದೆ. 5.63 ಲಕ್ಷ ಕೋಟಿ ರೂ. ವಿತ್ತೀಯ ಕೊರತೆ ಇದೆ. ದೇಶದ ಪ್ರತಿ ನಾಗರಿಕರ ಮೇಲೆ 4.68 ಲಕ್ಷ ರೂ. ಸಾಲ ಹೊರಿಸಿದೆ. ನಬಾರ್ಡ್ ಮೂಲಕ ಕೇಂದ್ರ ಸರ್ಕಾರ ಹೆಚ್ಚಿನ ಸಾಲ ಮಂಜೂರು ಮಾಡಿದ್ದರೆ ಜನರು ಮೈಕ್ರೋ ಫೈನಾನ್ಸ್ ಮೊರೆ ಹೋಗುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಫಸಲ್ ಬಿಮಾ ಯೋಜನೆಯ ಫಲವೂ ರೈತರಿಗೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಘೋಷಿಸಿಯೂ ಕೊಟ್ಟಿಲ್ಲ. ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿಯೂ ನಮ್ಮದೇ ಸರ್ಕಾರದ ಯೋಜನೆ, ಎಸ್‌ಸಿಪಿ, ಟಿಎಸ್‌ಪಿ ಅನುದಾನ ಕೊಟ್ಟಿರುವುದೂ ನಮ್ಮದೇ ಸರ್ಕಾರ. ಆದರೆ, ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಈ ವೇಳೆ ಮಾತನಾಡಿದ ಸ್ಪೀಕರ್, 2024-25ರ ಬಜೆಟ್‌ನಲ್ಲಿ ಕ್ರಮ ತೆಗೆದುಕೊಂಡ ವರದಿ (ಎಟಿಆರ್) ಪ್ರಾಥಮಿಕವಾಗಿದ್ದು, ಸಂಪೂರ್ಣ ವರದಿ ನಂತರ ಬರಲಿದೆ ಎಂದರು.