ಮೈಸೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಮೌನ ತಾಳಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು, ಸಿಎಂ ಪತ್ನಿಗೆ ಮುಡಾ ಕೊಟ್ಟಿರುವ 14 ನಿವೇಶನಗಳ ವಿಚಾರವಾಗಿ ದೊಡ್ಡ ಆಂದೋಲನವನ್ನೇ ಬಿಜೆಪಿ ನಡೆಸಿತ್ತು. ಈಗ ಎಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ಸರ್ಕಾರಿ ಜಮೀನನ್ನ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಾಖಲೆ ಹೇಳುತ್ತಿದೆ. ಈಗೇಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
2002 ರಲ್ಲಿ ಸಂಪತ್ ಎಂಬ ವ್ಯಕ್ತಿ ಅಕ್ರಮದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ವರದಿ ಪ್ರಕಾರ 8.30 ಗುಂಟೆ ಒತ್ತುವರಿ ಆಗಿದೆ ಎಂದು ಲೋಕಾಯುಕ್ತಾ ವರದಿಯಲ್ಲಿ ಉಲ್ಲೇಖವಿದೆ. 2009 ರಲ್ಲಿ ತನಿಖಾ ವರದಿ ಮುಕ್ತಾಯವಾಗುತ್ತದೆ. ಆದರೂ ಒತ್ತುವರಿ ಜಾಗವನ್ನ ವಾಪಸ್ ತೆಗೆದುಕೊಳ್ಳುವ ಕೆಲಸವನ್ನ ಅಂದಿನ ಬಿಜೆಪಿ ಸರ್ಕಾರ ಮಾಡೋದಿಲ್ಲ. 2011 ರಲ್ಲಿ ಸಂಪತ್ತು ಮತ್ತೊಮ್ಮೆ ದೂರು ಸಲ್ಲಿಸುತ್ತಾರೆ.
2014 ರಲ್ಲಿ ಕಂದಾಯ ಇಲಾಖೆಗೆ ಲೋಕಾಯುಕ್ತಾ ಸೂಚನೆ ನೀಡುತ್ತದೆ. ಎಸ್.ಆರ್ ಹೀರೇಮಠ್ ಅವರು ಹೈಕೋರ್ಟ್ ನಲ್ಲಿ ಕಾನೂನು ಹೋರಾಟಕ್ಕೆ ಇಳಿಯುತ್ತಾರೆ. 2020 ರಂದು ಸಮಾಜ ಪರಿವರ್ತನಾ ಸಮುದಾಯ ಉಚ್ಚ ನ್ಯಾಯಾಲಯದಲ್ಲಿ ಕಂಟೆಪ್ಟ್ ಮೂವ್ ಮಾಡುತ್ತಾರೆ. ಸುಮಾರು 200 ಎಕರೆ ಭೂಮಿಯನ್ನ ಎಚ್.ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ ಎಂದು ವರದಿ ಹೇಳುತ್ತದೆ.
2004, 2006, 2008, 09 ರಲ್ಲಿ ಕುಮಾರಸ್ವಾಮಿ ಸರ್ಕಾರದ ಭಾಗವಾಗಿದ್ದರು. ಯಾವ ಜಮೀನಿನನ್ನೂ ಒತ್ತುವರಿ ಮಾಡಿಕೊಂಡಿಲ್ಲ ಎನ್ನುವುದಕ್ಕೆ ಕುಮಾರಸ್ವಾಮಿ ಒಂದು ದಾಖಲೆ ತೋರಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿಯವರಿಗೆ ಏನಾದರೂ ಮಾನ ಮರ್ಯಾದೆ ಇದ್ದರೆ ಈ ಬಗ್ಗೆ ಮಾತನಾಡಬೇಕು. ಈ ಬಗ್ಗೆ ಯಾಕೆ ಮಾತಾಡುತ್ತಿಲ್ಲ. ಸಿಎಂ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಅವರ ಶಕ್ತಿ ಕುಂದಿಸುವ ಕೆಲಸ ಮಾಡಿದ್ದಿರಿ. ಇದರ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಎಂದು ಕಿಡಿಕಾರಿದರು.
ಮುಸ್ಲಿಮರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ.4 ಮೀಸಲಾತಿ ವಿಚಾರ ಕುರಿತು ಮಾತನಾಡಿ, ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರಲ್ಲ. ಕ್ರಿಶ್ಚಿಯನ್, ಸಿಖ್, ಜೈನರು ಸೇರಿದಂತೆ 7 ಸಮುದಾಯಗಳ ಬರುತ್ತದೆ. ಒಟ್ಟು ಶೇ.43 ಮೀಸಲಾತಿಯನ್ನ ಗುತ್ತಿಗೆಯಲ್ಲಿ ಕೊಡಲಾಗಿದೆ. ಅದರಲ್ಲಿ ಎಸ್ಸಿ, ಎಸ್ಟಿ, ಒಬಿಸಿ ,ಮೈನಾರಿಟೀಸ್ ಸೇರಿದೆ. ಮುಸ್ಲಿಮರು ಈ ದೇಶದವರಲ್ವಾ.? ಎಸ್ಸಿ, ಎಸ್ಟಿ,ಮತ್ತು ಒಬಿಸಿಗೆ ಕೊಟ್ಟಿರುವ ಶೇ.43 ಅನ್ನು ರದ್ದು ಮಾಡಿಸುವ ಹುನ್ನಾರ ಮಾಡುತ್ತಿದ್ದಾರೆ. ಮೇಲ್ವರ್ಗದವರಿಗೂ 10% ಮೀಸಲಾತಿ ಕೊಟ್ಟಿಲ್ವಾ.? ಅದಕ್ಕೇ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದ್ರಾ.? ಮುಸ್ಲಿಮರನ್ನ ಯಾವುದಕ್ಕೂ ಪರಿಗಣಿಸೋದೆ ಬೇಕಿಲ್ವಾ.? ನೀವು ಏನು ತಿಪ್ಪರಲಾಗ ಹಾಕಿದ್ರು 4% ಮೀಸಲಾತಿ ಜಾರಿ ಮಾಡೇ ಮಾಡುತ್ತೇವೆ ಎಂದು ಸವಾಲೆಸೆದರು.