ಬೆಂಗಳೂರು: ಇಷ್ಟು ದಿನ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದ ಕಾಂಗ್ರೆಸ್ ನಾಯಕರು, ಇದೀಗ ಬೆಲೆ ಏರಿಕೆಯನ್ನೇ ಬಂಡವಾಳ ಮಾಡಿಕೊಂಡು ರಾಜ್ಯದ ಜನರ ರಕ್ತ ಹೀರುತ್ತಿದ್ದಾರೆಂದು ಜೆಡಿಎಸ್ ಕಿಡಿಕಾರಿದೆ.
ನಂದಿನಿ ತುಪ್ಪದ ಬೆಲೆ ಏರಿಕೆಯಾಗಿರುವ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ ಮಾಡಿರುವ ಜೆಡಿಎಸ್, ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದೆ.
ಬಂಡವಾಳವಿಲ್ಲದ ಬಡಾಯಿ ಕಾಂಗ್ರೆಸ್ ಬೆಲೆ ಏರಿಕೆಯನ್ನೇ ಬಂಡವಾಳ ಮಾಡಿಕೊಂಡು, ಕರ್ನಾಟಕದ ಜನರ ರಕ್ತ ಹೀರುತ್ತಿದೆ. ಇಷ್ಟು ದಿನ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದ ಕಾಂಗ್ರೆಸ್ ನಾಯಕರು, ಜಿಎಸ್'ಟಿ ಸರಳೀಕರಣದ ಬಳಿಕ ರಾಜ್ಯದಲ್ಲಿ ಬೆಲೆಗಳ ಇಳಿಕೆ ಮಾಡಬೇಕಿತ್ತು. ಆದರೆ ಏಕಾಏಕಿ ನಂದಿನಿ ತುಪ್ಪದ ಬೆಲೆಯನ್ನು ಪ್ರತಿ ಕೆಜಿಗೆ 90 ರೂ. ಹಾಗೂ ಬೆಣ್ಣೆ ಪ್ರತಿ ಕೆಜಿಗೆ 38 ರೂ. ಏರಿಸುವ ಮೂಲಕ ಗ್ರಾಹಕರ ಹಗಲು ದರೋಡೆಗೆ ಇಳಿದಿದೆ. ಜನ ವಿರೋಧಿ ಕಾಂಗ್ರೆಸ್ ಸರ್ಕಾರದಿಂದ ನಾಡಿನ ಬಡವರು, ಜನಸಾಮಾನ್ಯರ ಉದ್ಧಾರ ಅಸಾಧ್ಯ ಎಂದು ಹೇಳಿದೆ.
ಕಾಂಗ್ರೆಸ್ ಸರ್ಕಾರದ ನಿರಂತರ ಬೆಲೆ ಏರಿಕೆಗೆ ಕನ್ನಡಿಗರು ಪ್ರತಿ ದಿನ ಬೆಂದು ಹೋಗುತ್ತಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರ ಹಿಡಿದ ಕಾಂಗ್ರೆಸ್, ಕಳೆದ ೨.೫ ವರ್ಷದಲ್ಲಿ ಮಾಡಿದ ಬೆಲೆ ಏರಿಕೆಗಳಿಗೆ ಲೆಕ್ಕವೇ ಇಲ್ಲ. ಅವೈಜ್ಞಾನಿಕ ಗ್ಯಾರಂಟಿಗಾಗಿ ಜನರ ಸುಲಿಗೆಯನ್ನೇ ವೃತ್ತಿಮಾಡಿಕೊಂಡು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಬಸ್, ಮೆಟ್ರೋ ಪ್ರಯಾಣ ದರ, ಹಾಲು, ಮೊಸರು, ನೀರು, ವಿದ್ಯುತ್ ಬೆಲೆ ಹೆಚ್ವಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕಿಡಿಕಾರಿದೆ.
ಸಾಲ ಮಾಡಿಯಾದರೂ ತುಪ್ಪ ತಿನ್ನು" ಗಾದೆ ಮಾತಿದೆ. ಆದರೆ, ಕಾಂಗ್ರೆಸ್ ಸರ್ಕಾರ ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ತುಪ್ಪ ತಿನ್ನುತ್ತಿದೆ. ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿಮೆ ಮಾಡಿದ್ದರೂ, ಕಾಂಗ್ರೆಸ್ ಸರ್ಕಾರ ನಂದಿನಿ ತುಪ್ಪದ ಬೆಲೆಯನ್ನು ಏಕಾಏಕಿ 1 ಕೆ.ಜಿ.ಗೆ 90 ರೂ. ಏರಿಸಿ ಹಗಲು ದರೋಡೆ ಮಾಡುತ್ತಿದೆ.
ಗ್ಯಾರಂಟಿಗಾಗಿ ಬೊಕ್ಕಸ ಖಾಲಿಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನಿರಂತರವಾಗಿ ರಾಜ್ಯದ ಜನರಿಗೆ ದರ ಏರಿಕೆಯ ಬರೆ ಹಾಕುತ್ತ ಸುಲಿಗೆಗೆ ಇಳಿದಿದೆ ಎಂದು ವಾಗ್ದಾಳಿ ನಡೆಸಿದೆ.