ನವದೆಹಲಿ: ರಾಜ್ಯದಲ್ಲಿ ಇಷ್ಟು ದಿನ ಸದ್ದು ಮಾಡುತ್ತಿದ್ದ ಕಾಂಗ್ರೆಸ್ ಕ್ರಾಂತಿಗೆ ಫುಲ್ ಸ್ಟಾಪ್ ಬಿದ್ದಿದ್ದು, ಸಂಪುಟ ಪುನಾರಚನೆ ಮೂಲಕ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಂಪುಟ ಪುನರ್ರಚನೆ ಪ್ರಸ್ತಾಪಿಸಿದ್ದು, ಈ ವೇಳೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆಸಿ ವೇಣುಗೋಪಾಲ್ ಅವರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ಅಗತ್ಯವಿದೆ ಎಂದು ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಈ ಕುರಿತ ನಿರ್ಧಾವನ್ನು ರಾಹುಲ್ ಗಾಂಧಿ ಅವರ ಮೇಲೆ ಬಿಟ್ಟಿದ್ದಾರೆ.
ಬಿಹಾರ ಚುನಾವಣೆಯಲ್ಲಿನ ಹೀನಾಯ ಸೋಲು ಕಾಂಗ್ರೆಸ್ ಪಕ್ಷದ ನಿದ್ದೆ ಕೆಡಿಸಿದ್ದು, ಸಂಪುಟ ಅಥವಾ ಸಿಎಂ ಹುದ್ದೆಯಲ್ಲಿ ಯಾವುದೇ ಬದಲಾವಣೆಯನ್ನು ನಿರ್ಧರಿಸುವ ಮೊದಲು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಸಂಪುಟ ಪುನರ್ರಚನೆ ಶೀಘ್ರದಲ್ಲೇ ನಡೆಯುವ ಸಾಧ್ಯತೆಗಳು ಕಡಿಮೆ ಎಂದು ಹೇಳಿದ್ದಾರೆ.
ಆದರೆ, ಸಿದ್ದರಾಮಯ್ಯ ಅವರ ಪಾಳಯ ಡಿಸೆಂಬರ್ 8 ರಿಂದ ಪ್ರಾರಂಭವಾಗುವ ಅಧಿವೇಶನದ ನಂತರ ಸಂಪುಟ ಪುನಾರಚನೆ ನಡೆಸುವಂತೆ ಖರ್ಗೆಯವರು ಹಸಿರು ನಿಶಾನೆ ತೋರಿಸಿದ್ದಾರೆಂದು ಹೇಳಿದ್ದಾರೆ.
ಏತನ್ಮಧ್ಯೆ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿರುವ ಡಿಕೆ.ಶಿವಕುಮಾರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು, ಸಂಪುಟ ಪುನಾರಚನೆಗೆ ಪ್ರಸ್ತಾವನೆ ಸಲ್ಲಿಸಿದ್ದರು, ಇದರ ಬೆನ್ನಲ್ಲೇ ಡಿಕೆ.ಶಿವಕುಮಾರ್ ಹಾಗೂ ಡಿಕೆ.ಸುರೇಶ್ ಅವರೂ ಕೂಡ ಭೇಟಿ ಮಾಡಿದ್ದರು.
ಭೇಟಿ ಬಳಿಕ ಹೇಳಿಕೆ ನೀಡಿದ್ದ ಡಿಕೆ.ಶಿವಕುಮಾರ್ ಅವರು, ತಮ್ಮ ದೆಹಲಿ ಭೇಟಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.
ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸಚಿವರಾಗುವ ಹಕ್ಕನ್ನು ಹೊಂದಿದ್ದಾರೆ. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಅಧಿಕಾರ ಮುಖ್ಯಮಂತ್ರಿಗೆ ಇದೆ. ನಾಯಕರು ಪಕ್ಷಕ್ಕಾಗಿ ತ್ಯಾಗ ಮಾಡಿ ಕೆಲಸ ಮಾಡಿದ್ದಾರೆ. ಅದಕ್ಕಾಗಿಯೇ ಅವರು ಅಧಿಕಾರಕ್ಕಾಗಿ ಹಾತೊರೆಯುತ್ತಾರೆ. ಅದನ್ನು ತಪ್ಪು ಎಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸಂಪುಟ ಪುನರ್ರಚನೆ ಅಥವಾ ನಾಯಕತ್ವದಲ್ಲಿ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಜ್ಯೋತಿಷ್ಯ ಕೇಳಿ. ನಾನು ಖರ್ಗೆ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಹೊಸ ಪಕ್ಷದ ಕಚೇರಿಗಳ ಶಂಕುಸ್ಥಾಪನೆ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸುವಂತೆ ಅವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮಾತನಾಡಿ, ಸರ್ಕಾರ ಎರಡು ವರ್ಷಗಳನ್ನು ಪೂರ್ಣಗೊಳಿಸಿದ 4-5 ತಿಂಗಳ ಹಿಂದೆ ಸಚಿವ ಸಂಪುಟ ಪುನರಾಚನೆ ಮಾಡುವಂತೆ ಹೈಕಮಾಂಡ್ ಸೂಚಿಸಿತ್ತು. ಎರಡೂವರೆ ವರ್ಷಗಳ ನಂತರ ಇದೀಗ ಸಂಪುಟ ಪುನಾರಚನೆ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲಾ 142 ಶಾಸಕರು ಅದಕ್ಕೆ ಅರ್ಹರು ಎಂದು ತಿಳಿಸಿದರು.