ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮುಂದುವರಿಯುವ ಬಗ್ಗೆ ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ, ವಿಜಯೇಂದ್ರಗೆ ಪರ್ಯಾಯವಾಗಿ ರಾಜ್ಯಾಧ್ಯಕ್ಷರಾಗುತ್ತಾರೆ ಎನ್ನುವವರು ಪಕ್ಷದಲ್ಲಿ ಇಲ್ಲ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡೇ ವರ್ಷಕ್ಕೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದರೆ ಅವಕಾಶ ಕಿತ್ತುಕೊಂಡಂತೆ ಆಗಲಿದೆ. ಇದರ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳಬೇಕು.
ಅವರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಪಕ್ಷದ ಕೆಲಸ ಮಾಡುತ್ತೇವೆ. ವಿಜಯೇಂದ್ರಗೆ ಇನ್ನೂ ಒಂದು ವರ್ಷ ಅವಕಾಶ ಕೊಟ್ಟರೆ ಪೂರ್ಣ ಅವಕಾಶ ಕೊಟ್ಟಂತಾಗಲಿದೆ. ಯಾರಿಗೇ ಆಗಲಿ ಪೂರ್ಣ ಅವಕಾಶ ಕೊಟ್ಟು ನೋಡಬೇಕು ಎಂದು ಅಭಿಪ್ರಾಯಪಟ್ಟರು.
ವಿಜಯೇಂದ್ರ ಮುಂದೆ ಇನ್ನೂ ದೊಡ್ಡ ಸವಾಲುಗಳಿವೆ, ಹಲವು ಚುನಾವಣೆಗಳು ಎದುರಾಗಲಿವೆ. ಅವರು 2 ವರ್ಷ ಪೂರೈಸಿದ್ದು ಗೊತ್ತೇ ಆಗಲಿಲ್ಲ. ಅವರಿನ್ನೂ ಕ್ರಿಯಾಶೀಲರಾಗಬೇಕು. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗಬೇಕು. ವಿಜಯೇಂದ್ರ ಏಕಾಂಗಿಯಾಗಿ ಪಕ್ಷ ಸಂಘಟನೆ ಮಾಡುವುದು ಕಷ್ಟ. ಜಿಲ್ಲೆಗಳಲ್ಲಿ ಪರಿಪೂರ್ಣ ಜವಾಬ್ದಾರಿ ಸಿಗಬೇಕು. ಆಗ ಅವರ ಬಲ ಹೆಚ್ಚಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.