ಬೆಂಗಳೂರು: ನಾನು ಶಾಶ್ವತವಾಗಿ ಇರಲು ಆಗದು, ಬೇರೆಯವರಿಗೆ ಅವಕಾಶ ನೀಡಬೇಕು. ನಾನು ಎಲ್ಲಿರುತ್ತೇನೋ ಎಲ್ಲಿ ಇರುವುದಿಲ್ಲವೋ ಎನ್ನುವುದು ಮುಖ್ಯ ಅಲ್ಲ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದೇ ನಮ್ಮ ಉದ್ದೇಶ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಬುಧವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪರ್ಮನೆಂಟ್ ಆಗಿ ಇರುವುದಕ್ಕೆ ಆಗಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ಐದೂವರೆ ವರ್ಷವಾಯಿತು.
ಇನ್ನೂ ಸ್ವಲ್ಪ ದಿನ ಕಳೆದರೇ, ಆರು ವರ್ಷವಾಗುತ್ತೆ. ಡಿಸಿಎಂ ಆದ ತಕ್ಷಣವೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಬೇಕೆಂದು ನಿರ್ಧರಿಸಿದ್ದೆ. ಆದರೇ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿಯಿರಿ ಎಂದು ಹೇಳಿದ್ದರು ಎಂಬುದಾಗಿ ತಿಳಿಸಿದ್ದಾರೆ.
ನಾನು ಅಧಿಕಾರದಲ್ಲಿ ಇರುತ್ತೇನೋ ಇರಲ್ವೋ ಅದು ಇಂಪಾರ್ಟೆಂಟ್ ಅಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು ಎಂಬುದಷ್ಟೇ ಮುಖ್ಯ. ಪರ್ಮನೆಂಟ್ ಆಗಿ ಮುಂದುವರಿಯೋಕಾಗಲ್ಲ .
ಕೆಲವರು ಪಕ್ಷದ ಕಚೇರಿಯನ್ನೇ ಮರೆತುಬಿಟ್ಟಿದ್ದಾರೆ. ಪಕ್ಷ ಅಂದ್ರೆ ದೇವಸ್ಥಾನ ಎನ್ನುವುದನ್ನೇ ಕೆಲವರು ಮರೆತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.
ಯಾರು ನೂರು ಕೆಪಿಸಿಸಿ ಕಟ್ಟಡ ಕಟ್ಟಲು ಆಸಕ್ತಿ ವಹಿಸಲ್ಲ ಅಂಥವರ ಪಟ್ಟಿಯನ್ನು ನಾನು ಹೈಕಮಾಂಡ್ ಗೆ ನೀಡುತ್ತೇನೆ. ಅವರಿಗೆಲ್ಲ ನಾನು ಉತ್ತರ ಕೊಡೋದಕ್ಕೆ ಹೋಗಲ್ಲ, ಎಲ್ಲದಕ್ಕೂ ದೆಹಲಿಯವರೇ ಉತ್ತರ ಕೊಡ್ತಾರೆ. ಯಾರು ಪಕ್ಷದ ಕೆಲಸಕ್ಕೆ ಆಸಕ್ತಿ ವಹಿಸಲ್ಲ ಅವರಿಗೆ ದೆಹಲಿಯವರು ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.