ಚಾಮರಾಜನಗರ: 'ನವೆಂಬರ್ ಕ್ರಾಂತಿ'ಯ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದು ಕೇವಲ "ಮಾಧ್ಯಮ ಸೃಷ್ಟಿ" ಎಂದು ಗುರುವಾರ ಹೇಳಿದ್ದಾರೆ.
ನನ್ನ ಸ್ಥಾನ ಮೊದಲಿನಿಂದಲೂ ಗಟ್ಟಿಯಾಗಿದೆ. ಈಗಲೂ ಗಟ್ಟಿಯಾಗಿದೆ ಮತ್ತು ಭವಿಷ್ಯದಲ್ಲಿಯೂ ಹಾಗೆಯೇ ಮುಂದುವರಿಯುತ್ತದೆ ಎಂದು ಸಿಎಂ ಒತ್ತಿ ಹೇಳಿದರು.
ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಎರಡೂವರೆ ವರ್ಷ ಆದಮೇಲೆ ಸಂಪುಟ ಪುನಾರಚನೆ ಮಾಡೋಣ ಅಂದಿದ್ದೆ, ಆ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದಕ್ಕೆ ಎಲ್ಲರೂ ಕ್ರಾಂತಿ ಅಂತ ತಿಳಿದುಕೊಂಡಿದ್ದರು. ಆದರೆ, ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಮತ್ತೆ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ, ಎಲ್ಲಿಯತನಕ ಜನರ ಆಶೀರ್ವಾದ ಇರುತ್ತೆ, ಅಲ್ಲಿ ತನಕ ನಾನೇ ಸಿಎಂ ಆಗಿರುತ್ತೇನೆ ಎಂದರು.
2028ರ ಚುನಾವಣೆಯಲ್ಲಿ ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ವಿಚಾರವನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡೋಣ ಎಂದು ಸಿಎಂ ತಿಳಿಸಿದರು.
"ಜನರು ನಮಗೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಜನಾದೇಶ ನೀಡಿದ್ದಾರೆ. ನಾವು ಭರವಸೆ ನೀಡಿದ ಐದು ಗ್ಯಾರಂಟಿಗಳನ್ನು ಈಡೇರಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ" ಎಂದು ಸಿದ್ದರಾಮಯ್ಯ ಹೇಳಿದರು.
ಐದು ವರ್ಷಗಳ ಕಾಲ ನೀವೇ ಸಿಎಂ ಆಗಿ ಇರುತ್ತೀರಾ? ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಸಿಎಂ, "ಇದರ ಅರ್ಥವೇನು? ಇವು ಅನಗತ್ಯ ಚರ್ಚೆಗಳು. ಎರಡೂವರೆ ವರ್ಷದ ನಂತರ ಸಂಪುಟ ಪುನರ್ರಚನೆ ಮಾಡೋಣ ಅಂತ ನಾನು ಪಕ್ಷದ ಹೈಕಮಾಂಡ್‌ಗೆ ಹೇಳಿದ್ದೆ. ಅದರ ನಂತರವೇ ಅಧಿಕಾರ ಹಂಚಿಕೆಯ ಕುರಿತು ಈ ಚರ್ಚೆಗಳು ಪ್ರಾರಂಭವಾದವು" ಎಂದರು.
ಇದೇ ವೇಳೆ ಸಂಪುಟ ಪುನರ್ರಚನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆಯೇ ಎಂದು ಕೇಳಿದಾಗ, ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಚಾಮರಾಜನಗರಕ್ಕೆ ಭೇಟಿ ನೀಡಿದಾಗ ನನ್ನ ಅಧಿಕಾರ ಭದ್ರ
ಚಾಮರಾಜನಗರಕ್ಕೆ ಭೇಟಿ ನೀಡುವ ಹಾಲಿ ಮುಖ್ಯಮಂತ್ರಿಗಳು ಮಧ್ಯದಲ್ಲಿಯೇ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, "ನನಗೆ ಮೌಢ್ಯಗಳಲ್ಲಿ ನಂಬಿಕೆ ಇಲ್ಲ. ನನಗೆ, ಚಾಮರಾಜನಗರ, ಮೈಸೂರು ಅಥವಾ ಬೆಂಗಳೂರು ಎಲ್ಲವೂ ಒಂದೇ. ನಾನು ರಾಜ್ಯದ 31 ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ" ಎಂದು ಹೇಳಿದರು.
ನಾನು ಇಲ್ಲಿಗೆ ಬಂದಾಗ ನನಗೆ ಅಧಿಕಾರ ಗಟ್ಟಿಯಾಗಿದೆ. ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದರೋಡೆಕೋರರ ಸುಳಿವು ಸಿಕ್ಕಿದೆ
ಬುಧವಾರ ಬೆಂಗಳೂರಿನಲ್ಲಿ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿಯಾಗಿರುವ ದರೋಡೆಕೋರರ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, "ನಮಗೆ ಅವರ ಬಗ್ಗೆ ಸುಳಿವು ಸಿಕ್ಕಿದೆ. ಕಾರನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ನಾವು ದರೋಡೆಕೋರರನ್ನು ಗುರುತಿಸಿ ಬಂಧಿಸುತ್ತೇವೆ" ಎಂದು ಹೇಳಿದರು.