ಬೆಂಗಳೂರು: ನಾಯಕತ್ವ ಗೊಂದಲ ಬಗೆಹರಿಯಬೇಕಾದರೆ ವಿಧಾನಸಭೆ ವಿಸರ್ಜಿಸಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ, ಚುನಾವಣೆಯಲ್ಲಿ ಗೆದ್ದ ನಂತರ ಡಿಕೆ ಶಿವಕುಮಾರ್ 5 ವರ್ಷ ಮುಖ್ಯಮಂತ್ರಿಯಾಗಿರಲಿ ಎಂದು ಶಾಸಕ ಕೆ.ಎನ್.ರಾಜಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಬದಲಾವಣೆ ಮಾಡುವುದಿದ್ದರೆ ಸಿಎಲ್‌ಪಿ ಸಭೆಯಲ್ಲೇ ನಿರ್ಧಾರವಾಗಲಿ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಯಾರೂ ಹೇಳಿಲ್ಲ. 30–30 ತಿಂಗಳು ಅಧಿಕಾರ ಹಂಚಿಕೆ ಒಪ್ಪಂದವಾಗಿದೆ ಎಂದು ಸುಮ್ಮನೆ ಕೆಲವರು ಹೇಳುತ್ತಿದ್ದಾರೆ ಎಂದರು.
ನನ್ನದು ಸಿದ್ದರಾಮಯ್ಯ ಸಿಎಂ ಆಗಿರಬೇಕೆಂಬ ಅಭಿಪ್ರಾಯ. ಅನಿವಾರ್ಯತೆ ಬಂದರೆ ಪರಮೇಶ್ವರ್ ಸಿಎಂ ಆಗಲಿ. ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿರುವುದು ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್ ಪಿ) ಅಲ್ವಾ? ಈಗಲೂ ಸಿಎಲ್ ಪಿಯಲ್ಲಿ ತೀರ್ಮಾನ ಆಗಬೇಕು. ಸಿಎಲ್ ಪಿಯಲ್ಲು ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಯಾರಾದರೂ ಕೇಳಿದ್ದಾರಾ ಎಂದು ಪ್ರಶ್ನಿಸಿದರು.
2013ರಲ್ಲಿ ಪರಮೇಶ್ವರ್ ಪಕ್ಷವನ್ನು ಅಧಿಕಾರಕ್ಕೆ ತಂದರೂ, ಅವರು ಸೋತರು. ಪರಮೇಶ್ವರ್ ಆದರೆ ದುರದೃಷ್ಟವಶಾತ್ ಅವರು ಸೋತರು. ಇವರು (ಡಿಕೆ ಶಿವಕುಮಾರ್) ಈಗ ಕೂಲಿ ಕೇಳುವವರು. ಆದರೆ ಪರಮೇಶ್ವರ್ ಅವರದ್ದೂ ಕೂಲಿ ಇದೆಯಲ್ಲಾ? ಅವರದ್ದು ಹಳೆಯ ಕೂಲಿ, ಮೊದಲು ಅದು ಚುಕ್ತಾ ಆಗಲಿ. ಆಮೇಲೆ ಇವರ ವಿಚಾರ ನೋಡೋಣ ಎಂದರು.
ನಾಯಕತ್ವದ ಬಗ್ಗೆ ಮಾತನಾಡಬಾರದು ಎಂದು ಹೈಕಮಾಂಡ್ ಹೇಳಿದ್ದಾರೆ. ಅದಕ್ಕಾಗಿ ನಾನು ಮಾತನಾಡುವುದಿಲ್ಲ. ನನ್ನ ವೈಯಕ್ತಿಕ ಆಶಯ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕೆಂದು ಎಂದರು. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಮುಂದಿನ ಚುನಾವಣೆಯಲ್ಲಿ ಎಲ್ಲರೂ ಹೋಗೋಣ. ಆ ಬಹುಮತ ಪಡೆದು ಅವರೇ ಐದು ವರ್ಷ ಸಿಎಂ ಆಗಲಿ ಎಂದರು