ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಬಣ ಬಡಿದಾಟ ಜೋರಾಗಿರುವಂತೆಯೇ ಸಿದ್ದರಾಮಯ್ಯ vs ಡಿಕೆಶಿ 'ಹೈಡ್ರಾಮ' ಈಗ ದೆಹಲಿಗೆ ಶಿಫ್ಟ್ ಆಗಿದ್ದು, ಬಿಕ್ಕಟ್ಟು ಶಮನಕ್ಕೆ ಹೈಕಮಾಂಡ್ ಮುಂದಾಗಿದೆ.
ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಅವರ ಪರ ಸುಮಾರು 10 ಶಾಸಕರು ಕಳೆದ ವಾರ ದೆಹಲಿಗೆ ಹೋಗಿದ್ದರು. ಇದರೊಂದಿಗೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬಣ ಬಡಿದಾಟ ಜೋರಾಗಿ ನಡೆಯುತ್ತಿದ್ದು, ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ.
ರಾಜ್ಯ ರಾಜಕೀಯದಲ್ಲಿನ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ದೆಹಲಿ-ಬೆಂಗಳೂರು ಟೂರ್ ಮೂಲಕ ಮಾಹಿತಿ ಸಂಗ್ರಹಿಸಿರುವ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಇಬ್ಬರೂ ಇರುತ್ತಾರೆ. ಹೈಕಮಾಂಡ್ ಅಂದರೆ ಏಕಾಂಗಿ ಅಲ್ಲ. ಒಂದು ಟೀಮ್. ಹೈಕಮಾಂಡ್ ಟೀಮ್ ಕೂತು ಚರ್ಚಿಸಿ ನಿರ್ಣಯ ಕೈಗೊಳ್ಳುತ್ತದೆ ಎಂದು ಹೇಳಿದರು.
ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಕ್ಯಾಂಪ್‌ನಿಂದ 6 ಸಚಿವರು ದೆಹಲಿ ದಂಡಯಾತ್ರೆಗೆ ಸಜ್ಜಾಗಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಚಿವರು ದೆಹಲಿ ದಂಡಯಾತ್ರೆ ಹೋಗಲಿದ್ದಾರೆ. ಹೆಚ್.ಕೆ.ಪಾಟೀಲ್, ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಮತ್ತು ಇನ್ನಿಬ್ಬರು ಸಚಿವರು ನಾಳೆಯೇ ದೆಹಲಿಗೆ ಹೋಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಾಗುತ್ತಿರುವ ಬೆಳವಣಿಗೆ ಬಗ್ಗೆ ನಮಗೆ ಸಾಕಷ್ಟು ಗೊಂದಲಗಳಿವೆ. ನಾಳೆಯೇ ದೆಹಲಿಗೆ ಹೋಗಿ ಕ್ಲಾರಿಟಿ ಪಡೆದುಕೊಳ್ಳುತ್ತೇವೆ ಎಂಬ ವಿಚಾರವನ್ನು ಪರಮೇಶ್ವರ್ ಅವರು ಸಿಎಂ ಮುಂದಿಟ್ಟಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅವರು ಆಯ್ತು ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆನ್ನಲಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷದ ತುಂಬಿದ ಬೆನ್ನಲ್ಲೇ ಸಿಎಂ ಕುರ್ಚಿ ಕದನ ಏರ್ಪಟ್ಟಿದೆ. ಸಿಎಂ ಮತ್ತು ಡಿಸಿಎಂ ಹೈಕಮಾಂಡ್ ಕರೆದರೆ ನಾವು ಹೋಗ್ತೀವಿ ಅಂತ ಹೇಳಿಕೆ ಕೊಟ್ಟಿದ್ದರು. ಕೆಲದಿನಗಳ ಹಿಂದೆಯಷ್ಟೇ ಡಿಕೆ ಶಿವಕುಮಾರ್ ಬಣದ ನಾಯಕರು ದೆಹಲಿಗೆ ಹೋಗಿ ಬಂದಿದ್ದರು. ಈಗ ಡಿಸಿಎಂಗೆ ಟಕ್ಕರ್ ಕೊಡಲು ಸಿಎಂ ಕ್ಯಾಂಪ್‌ನಿಂದ ಹಿರಿಯ ನಾಯಕರು ದೆಹಲಿ ಕಡೆಗೆ ಮುಖ ಮಾಡಿದ್ದಾರೆ
ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್ ಅವರು ಸಭೆ ನಡೆಸಿದ್ದಾರೆ. ಬಿಹಾರ ಚುನಾವಣಾ ಫಲಿತಾಂಶದ ಜೊತೆಗೆ ಕರ್ನಾಟಕದ ಬೆಳವಣಿಗೆ ಕುರಿತು ಚರ್ಚೆ ನಡೆಸಿರುವ ಸಾಧ್ಯತೆಯಿದ್ದು, ಹೈಕಮಾಂಡ್ ಕೈಗೊಳ್ಳುವ ನಿರ್ಧಾರ ಕುತೂಹಲ ಕೆರಳಿಸಿದೆ.