ಸಂಗ್ರಹ ಚಿತ್ರ 
ರಾಜಕೀಯ

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಯಾವುದೇ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ರಾಜ್ಯದ ನಾಯಕತ್ವ ವಿಚಾರ ಕುರಿತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಜೊತೆಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು,

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಸಂಘರ್ಷ ಶೀಘ್ರವೇ ಇತ್ಯರ್ಥವಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ರಾಜ್ಯದ ನಾಯಕತ್ವ ವಿಚಾರ ಕುರಿತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಜೊತೆಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಮೂಲಕ ಸಿಎಂ ಕುರ್ಚಿ ಕುರಿತು ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ನಡುವಿನ ತಿಕ್ಕಾಟವನ್ನು ಒಪ್ಪಿಕೊಂಡಿದ್ದಾರೆ.

ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಕರ್ನಾಟಕದ ಜನರು ಮಾತ್ರ ನೋಡಲು ಸಾಧ್ಯ. ನಾನು ಹೇಳಲು ಬಯಸುವುದೇನೆಂದರೆ ಯಾವುದೇ ಸಮಸ್ಯೆಗಳೇ ಆದರೂ ಅದಕ್ಕೆ ಪರಿಹಾರ ಇದ್ದೇ ಇರುತ್ತದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜೊತೆಗೆ ಒಟ್ಟಿಗೆ ಕುಳಿತು ಚರ್ಚಿಸಲಾಗುವುದು. ನಂತರ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಏತನ್ಮಧ್ಯೆ ಮಂಗಳವಾರ ರಾಹುಲ್ ಅವರನ್ನು ಭೇಟಿಯಾದ ಆರ್‌ಡಿಪಿಆರ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಬೆಂಗಳೂರಿಗೆ ವಾಪಸ್ಸಾದರು.

ಈ ವೇಳೆ ಮಾತನಾಡಿರುವ ಅವರು, ಕಾಂಗ್ರೆಸ್ ಹೈಕಮಾಂಡ್ ಗುರುವಾರ ಮತ್ತು ಶುಕ್ರವಾರ ದೆಹಲಿಯಲ್ಲಿ ಸಭೆ ಸೇರಿ ನಾಯಕತ್ವದ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲಿದ್ದಾರೆಂದು ಹೇಳಿದರು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲು ಮತ್ತು ಹಿಂದುಳಿದ ವರ್ಗಗಳ ವಿಷಯದ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಲಿದೆ. ಈ ಸಂದರ್ಭದಲ್ಲಿ, ಕರ್ನಾಟಕದ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಲಿದ್ದಾರೆ. ಈ ಮೂಲಕ ಗೊಂದಲವನ್ನು ಪರಿಹರಿಸಲಿದ್ದಾರೆಂದು ತಿಳಿಸಿದರು.

ಈ ನಡುವೆ ರಾಹುಲ್ ಗಾಂಧಿಯವರು ಪ್ರಿಯಾಂಕ್ ಅವರನ್ನು ಚರ್ಚೆಗೆ ಕರೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉನ್ನತ ಹುದ್ದೆಗೆ ಗಂಭೀರ ಸ್ಪರ್ಧಿಯಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಇದರ ಬೆನ್ನಲ್ಲೇ ಸಿದ್ದರಾಮಯ್ಯ ಪಾಳಯದ ಶಾಸಕರು ಮತ್ತು ಸಚಿವರನ್ನು ಸಹ ಸಂಪರ್ಕಿಸಿದ ನಂತರ, ಹೈಕಮಾಂಡ್ ಸಮಸ್ಯೆಯನ್ನು ಪರಿಹರಿಸಲಿದೆ ಎಂದು ತಿಳಿದುಬಂದಿದೆ.

2023 ರಲ್ಲಿ ತಮ್ಮ ಮತ್ತು ಸಿದ್ದರಾಮಯ್ಯ ನಡುವೆ ಹೈಕಮಾಂಡ್ ಮಟ್ಟದಲ್ಲಿ ಅಧಿಕಾರ ಹಂಚಿಕೆ ಒಪ್ಪಂದವಾಗಿದೆ ಎಂಬ ಸಂದೇಶವನ್ನು ಶಿವಕುಮಾರ್ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಯಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಹೈಕಮಾಕಂಡ್ ನ.29ರಂದು ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡು, ಊಹಾಪೋಹಗಳಿಗೆ ತೆರೆ ಎಳೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ನಡುವೆ, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಂವಿಧಾನ ದಿನಾಚರಣೆಯಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಮುಖ್ಯಮಂತ್ರಿ ಹುದ್ದೆ ಅಥವಾ ಯಾವುದೇ ಇತರ ಹುದ್ದೆ ಮುಖ್ಯವಲ್ಲ. ಒಗ್ಗಟ್ಟಿನಿಂದ ಪಕ್ಷವನ್ನ ಅಧಿಕಾರಕ್ಕೆ ತರುವುದು ಮುಖ್ಯ ಎಂದು ಹೇಳಿದರು.

ಇದೇ ವೇಳೆ ಬೆಂಗಳೂರಿನ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು, ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಜನರನ್ನು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಸಮಾನತೆಯ ಸಾಂವಿಧಾನಿಕ ಆಕಾಂಕ್ಷೆಯನ್ನು ಪೂರೈಸಲು, ನಾನು ನನ್ನ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ್ದೇನೆ. ಈಗ, ಅಸಮಾನತೆಯನ್ನು ತೊಡೆದುಹಾಕಲು ಮತ್ತು ಎಲ್ಲರಿಗೂ ಆರ್ಥಿಕ ಶಕ್ತಿಯನ್ನು ತರಲು ನಾವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆಂದು ಹೇಳಿದರು.

ಏತನ್ಮಧ್ಯೆ, ಸಿದ್ದರಾಮಯ್ಯ ಅವರ ಆಪ್ತ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶಾಸಕರೊಂದಿಗೆ ಭೋಜನ ಕೂಟ ನಡೆಸಿದ್ದು, ಕುತೂಹಲ ಹೆಚ್ಚಾಗುವಂತೆ ಮಾಡಿದೆ.

ಇದಲ್ಲದೆ, ಡಿಕೆ.ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ಹೈಕಮಾಂಡ್ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿರ್ಧರಿಸಿದರೆ ಸಹಕಾರ ನೀಡುವಂತೆ ಕೋರಿದ್ದಾರೆಂದು ಮೂಲಗಳು ತಿಳಿಸಿವೆ.

ಜಾರಕಿಹೊಳಿಯವರಿಗೆ ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಹುದ್ದೆಗಳನ್ನು ತ್ಯಾಗ ಮಾಡುವುದಾಗಿ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಭಯ ನಾಯರು, ಈ ಭೇಟಿಗೂ ನಾಯಕತ್ವ ವಿಚಾರ ಮತ್ತು ಮುಂಬರುವ ಸಚಿವ ಸಂಪುಟ ಪುನರಾಚನೆಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ, ಪಕ್ಷದ ಸಂಘಟನೆ ಕುರಿತು ಚರ್ಚೆ ನಡೆಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸತೀಶ್ ಜಾರಕಿಹೊಳಿ ಪಕ್ಷದ ಹಿರಿಯ ನಾಯಕರು. ಕಾರ್ಯಕಾರಿ ಅಧ್ಯಕ್ಷರು, ನಾನು ಕೆಪಿಸಿಸಿ ಅಧ್ಯಕ್ಷ, ನಾವು ಬಹಳ ಸೌಹಾರ್ದಯುತ ಸಂಬಂಧವನ್ನು ಹಂಚಿಕೊಳ್ಳುತ್ತೇವೆ ಮತ್ತು ಒಟ್ಟಿಗೆ ಕೆಲಸ ಮಾಡುತ್ತೇವೆ. ಅವರು ಪಕ್ಷಕ್ಕೆ ದೊಡ್ಡ ಆಸ್ತಿ, ಮತ್ತು ನಾವು ಭವಿಷ್ಯದಲ್ಲಿ ಒಟ್ಟಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ನಾವು ಅಧಿಕಾರ ವಹಿಸಿಕೊಂಡು 2.5 ವರ್ಷಗಳಾಗಿವೆ. ಉಳಿದ ಅವಧಿಯಲ್ಲಿ ಏನು ಮಾಡಬೇಕೆಂಬುದರ ಕುರಿತು ಚರ್ಚಿಸಿದ್ದೇವೆಂದು ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ನನಗೆ ಯಾವುದೇ ಬಣವಿಲ್ಲ. ಒಂದು ಬಣವಿದೆ, ಅದು 'ಕಾಂಗ್ರೆಸ್ ಬಣ.' ನನ್ನ ಸಂಖ್ಯೆ 140. ಈ ಪಕ್ಷವು ಸಾಮೂಹಿಕ ನಾಯಕತ್ವದಿಂದ ನಿರ್ಮಿಸಲ್ಪಟ್ಟಿದೆ. ನಾನು ಪಕ್ಷಕ್ಕಾಗಿ ಒಬ್ಬಂಟಿಯಾಗಿ ಕೆಲಸ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ, ಸಿದ್ದರಾಮಯ್ಯ ಮತ್ತು ಎಲ್ಲಾ ಶಾಸಕರು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಪ್ತ ಗುಂಪಿನಿಂದ ಸ್ಪೋಟಕ ಸಂದೇಶ, ಡಾ. ಜಿ. ಪರಮೇಶ್ವರ್ ಹೇಳಿದ್ದೇನು?

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

SCROLL FOR NEXT