ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಅಂದ ಮೇಲೆ ನಾವು ಕೇಳಲೇಬೇಕು, ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇನೆ. ಅವರು ನನಗೆ ಕರೆ ಮಾಡಲಿ ನೋಡೋಣ ಎಂದು ಹೇಳಿದ್ದಾರೆ.
ರಾಜ್ಯದ ರೈತರ ವಿಶೇಷವಾಗಿ ಉತ್ತರ ಕರ್ನಾಟಕ ರೈತರ ಸಮಸ್ಯೆ ಕುರಿತು ಚರ್ಚಿಸಲು ಇಂದು ಸಿಎಂ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ಪಾಲಿಸುತ್ತೇನೆ ಎಂದು ಪುನರುಚ್ಛರಿಸಿದರು.
ಕರ್ನಾಟಕ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಸಂಘರ್ಷದ ನಡುವೆಯೇ, ಪಕ್ಷದ ಹೈಕಮಾಂಡ್ ಕರೆದರೆ ದೆಹಲಿಗೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹೈಕಮಾಂಡ್ ತೀರ್ಮಾನ ಮಾಡ್ತಾರೆ-ಮಲ್ಲಿಕಾರ್ಜುನ ಖರ್ಗೆ
ಈ ಮಧ್ಯೆ ಇಂದು ದೆಹಲಿಗೆ ಹೊರಡುವ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೆಹಲಿಗೆ ಹೋದ ಬಳಿಕ ಮೂರ್ನಾಲ್ಕು ಇಂಪಾರ್ಟೆಂಟ್ ಜನರನ್ನು ಕರೆಸಿ ಮಾತನಾಡ್ತೀನಿ. ಹೈಕಮಾಂಡ್ ಎಲ್ಲವನ್ನು ಸೆಟಲ್ ಮಾಡುತ್ತೆ ಎಂದರು.
ಇಂದು ದೆಹಲಿಯ ಇಂದಿರಾ ಕಾಂಗ್ರೆಸ್ ಭವನದಲ್ಲಿ ಹೈಕಮಾಂಡ್ ಸಭೆ ನಿಗದಿಯಾಗಿರುವ ಹಿನ್ನೆಲೆ ಬೆಂಗಳೂರಿನಿಂದ ಅವರು ದೆಹಲಿಗೆ ತೆರಳಿದರು. ಅದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ, ಮೂರ್ನಾಲ್ಕು ಜನರನ್ನು ಕರೆಸಿ ಮಾತಾಡ್ತೀನಿ. ಮುಂದೆ ಹೇಗೆ ನಡೆಯಬೇಕು ಅಂತ ತೀರ್ಮಾನ ಮಾಡ್ತೀನಿ. ಸಿಎಂ-ಡಿಸಿಎಂ ಎಲ್ಲರನ್ನೂ ಕರೆಸಿ ಸೆಟಲ್ ಮಾಡ್ತೀವಿ ಎಂದು ಹೇಳಿದರು.
ನಾನು ಎಲ್ಲರನ್ನೂ ಕರೆಸಿ ಚರ್ಚೆ ಮಾಡ್ತೇನೆ. ರಾಹುಲ್ ಗಾಂಧಿ ಕೂಡ ಸಭೆಯಲ್ಲಿ ಇರ್ತಾರೆ. ಸಿಎಂ ಡಿಸಿಎಂ ಇಬ್ಬರೂ ಇರ್ತಾರೆ. ಹೈಕಮಾಂಡ್ ಅಂದರೆ ಟೀಮ್ ಏಕಾಂಗಿ ಅಲ್ಲ. ಹೈಕಮಾಂಡ್ ಟೀಮ್ ಕೂತು ಚರ್ಚಿಸಿ ನಿರ್ಣಯ ಕೈಗೊಳ್ಳತ್ತೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಫೈಟ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇದೇ ಶನಿವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಿಎಂ, ಡಿಸಿಎಂ ಇಬ್ಬರೂ ಸಭೆಗೆ ತೆರಳುವ ಸಾಧ್ಯತೆಯಿದ್ದು, ಇನ್ನೆರಡು ದಿನಗಳಲ್ಲಿ ಸಂಧಾನ ಸೂತ್ರ ಹೊರಬೀಳಲಿದೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.
ಮೊನ್ನೆ ನವೆಂಬರ್ 20 ರಂದು ಕರ್ನಾಟಕ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧಭಾಗವನ್ನು ತಲುಪುತ್ತಿದ್ದಂತೆ ಊಹಾಪೋಹಗಳು ಹುಟ್ಟಿಕೊಂಡವು.